ಮಂಡ್ಯ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರು ರಾಜಧಾನಿ ಜನತೆಗೆ ಮತ್ತೊಂದು ಶಾಕ್ ನೀಡಿದ್ದು, ಶೀಘ್ರದಲ್ಲೇ ಕಾವೇರಿ ನೀರಿನ ದರ ಏರಿಕೆ ಮಾಡಲಾಗುವುದು ಎಂದು ಸೋಮವಾರ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಐದನೆ ಹಂತದ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕಾವೇರಿ ಐದನೆ ಹಂತದ ಯೋಜನೆಯನ್ನು ವಿಜಯದಶಮಿ ದಿನದಂದು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರಕ್ಕೆ ಕಾವೇರಿ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಐದನೆ ಹಂತದ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ. ಆರ್‌ಆರ್ ನಗರ, ಕೆಂಗೇರಿ, ಮಹಾದೇವಪುರ, ಬ್ಯಾಟರಾಯನಪುರ ಸೇರಿದಂತೆ ನಗರ ವ್ಯಾಪ್ತಿಯ ೧೧೦ ಹಳ್ಳಿಗಳಿಗೆ ಇಲ್ಲಿಂದ ನೀರು ಪೂರೈಕೆಯಾಗಲಿದೆ ಎಂದರು.
ಇದರ ಮಧ್ಯ ಬೆಂಗಳೂರಿಗರಿಗೆ ನೀರಿದ ದರ ಏರಿಕೆ ಶಾಕ್ ಕೊಟ್ಟ ಡಿಸಿಎಂ, ಕಾವೇರಿ ನೀರಿನ ದರವನ್ನು ಏರಿಕೆ ಮಾಡಲಾಗುತ್ತದೆ. ಯಾವಾಗಿನಿಂದ ನೀರಿನ ದರ ಏರಿಕೆ ಮಾಡುತ್ತೇವೆ ಎಂಬುದರ ಕುರಿತು ಶೀಘ್ರದಲ್ಲಿ ಹೇಳುತ್ತೆನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾವೇರಿನ ನೀರಿನ ದರ ಏರಿಕೆಯಾಗುವುದು ಪಕ್ಕಾ ಆದಂತಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅಲ್ಲದೇ ಅಡುಗೆ ಎಣ್ಣೆ ಸಹ ಏರಿಕೆಯಾಗಿದೆ. ಇದೀಗ ಬಸ್ ಟಿಕೆಟ್ ದರ ಮತ್ತು ನಂದಿನಿ ಹಾಲಿನ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದರ ಮಧ್ಯ ಕಾವೇರಿ ನೀರಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿಗರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
Advertisement