
ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರನ್ನು ಸಂಗ್ರಹಿಸಲು ನೆರವಾಗುವ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಂಗಾಳಕೊಲ್ಲಿಗೆ ಸೇರುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಮೇಕೆದಾಟು ಯೋಜನೆ ಮೂಲಕ ಸಂಗ್ರಹಿಸುವ ಗುರಿ ಇದೆ. ಈ ಯೋಜನೆ ಕರ್ನಾಟಕಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಚರ್ಚೆ ನಡೆಸುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, 'ಕರ್ನಾಟಕದ ಇತರ ಕೇಂದ್ರ ಸಚಿವರೊಂದಿಗೆ ಸೇರಿ ಪ್ರಧಾನಿ ಬಳಿ ಈ ವಿಚಾರವನ್ನು ತಿಳಿಸುವುದಾಗಿ ಹೇಳಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು TNIE ನಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿದ್ದು, ‘ತಮಿಳುನಾಡು ರೈತರು ಹೆಚ್ಚುವರಿ ಕಾವೇರಿ ನೀರನ್ನು ಸಂಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರೈತರು ತಮ್ಮ ಸರ್ಕಾರವು ಮೆಟ್ಟೂರು ಅಣೆಕಟ್ಟು ತುಂಬಿದ ನಂತರ ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ನಾವು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಲೇಖನವನ್ನು ನೋಡಿದ್ದೇನೆ. ಆದರೆ ಈ ಬಗ್ಗೆ ಕರ್ನಾಟಕದ ಜನರು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ನಾಯಕರಿಗೆ ಧೈರ್ಯವಿದ್ದರೆ, ಅವರು ತಮಿಳುನಾಡಿಗೆ ಹೋಗಿ ಸಿಎಂ ಎಂಕೆ ಸ್ಟಾಲಿನ್ ಅವರೊಂದಿಗೆ ಚರ್ಚಿಸಬೇಕು. ಮೇಕೆದಾಟು ಯೋಜನೆಗೆ ಆಕ್ಷೇಪಿಸದಂತೆ ಅವರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
“ಮೆಟ್ಟೂರು ಅಣೆಕಟ್ಟು ಒಂದೇ ವಾರದಲ್ಲಿ ಪೂರ್ಣ ಭರ್ತಿಯಾಗಿದೆ. ಹೆಚ್ಚುವರಿ ನೀರು ಸಮುದ್ರ ಸೇರುತ್ತಿದೆ. 2018-19ರಲ್ಲಿ 600 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಈ ಬಾರಿ ಕರ್ನಾಟಕದ ಜನತೆ ಬಿಜೆಪಿ ಮತ್ತು ಜೆಡಿಎಸ್‌ಗೆ ಸ್ವಲ್ಪ ಶಕ್ತಿ ನೀಡಿದ್ದಾರೆ. ಕಾನೂನಾತ್ಮಕವಾಗಿ ಪ್ರಧಾನಿ ಮೋದಿಯವರ ಮನವೊಲಿಸುತ್ತೇವೆ. ಕನ್ನಡಿಗರು ನಮಗೆ ನ್ಯಾಯಯುತವಾದ ನೀರನ್ನು ಪಡೆಯಲು ಲೋಕಸಭೆಯಲ್ಲಿ ಮಾತನಾಡಲು ನಮಗೆ ಶಕ್ತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
Advertisement