ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ 50 ತುಂಡುಗಳಾಗಿ ಕತ್ತರಿಸಿ ಫ್ರೀಡ್ಜ್ ನಲ್ಲಿಟ್ಟ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.
ಹತ್ಯೆಯ ನಂತರ ಆರೋಪಿ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದು, ಪ್ರಕರಣವನ್ನು ಭೇದಿಸಲು ರಚಿಸಲಾದ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಈ ಹತ್ಯೆಯು ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದರಿಂದ ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
"ಈಗಾಗಲೇ ಪೊಲೀಸರು ಆರೋಪಿ ಒಡಿಶಾದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ ಮತ್ತು ಮೂರ್ನಾಲ್ಕು ಪೊಲೀಸ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಆರೋಪಿ ತಾನು ಇರುವ ಸ್ಥಳಗಳನ್ನು ಬದಲಾಯಿಸುತ್ತಿದ್ದಾನೆ" ಎಂದು ಪರಮೇಶ್ವರ ಹೇಳಿದ್ದಾರೆ.
"ಆರೋಪಿಯನ್ನು ಬಂಧಿಸಿದ ನಂತರ, ನಮಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.... ಸದ್ಯ ಪ್ರಕರಣ ಸಂಬಂಧ ಎರಡು-ಮೂರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಲಭ್ಯವಿರುವ ಸಾಕ್ಷ್ಯ ಮತ್ತು ಮಾಹಿತಿಯ ಆಧಾರದ ಮೇಲೆ ಒಡಿಶಾದಲ್ಲಿರುವ ಆರೋಪಿ ಈ ಕೃತ್ಯ ಎಸಗಿರುವ ಅನುಮಾನವಿದೆ. ಹೀಗಾಗಿ ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಕಳೆದ ಶನಿವಾರ ವೈಯಾಲಿಕಾವಲ್‌ನಲ್ಲಿರುವ ಮನೆಯೊಂದರಲ್ಲಿ 29 ವರ್ಷದ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿತ್ತು. ಹತ್ಯೆಯಾದ ಮಹಿಳೆಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಕೊಲೆಯ ಬಳಿಕ ಮೃತದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಿ ಒಂದೇ ಬಾಗಿಲಿನ 165-ಲೀಟರ್ ಫ್ರಿಡ್ಜ್ ನಲ್ಲಿಡಲಾಗಿತ್ತು.
Advertisement