
ಬೆಂಗಳೂರು: ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿರುವ ಮುಕ್ತ ಒಪ್ಪಿಗೆಯನ್ನು ಹಿಂಪಡೆಯುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡಲು ಅನುವು ಮಾಡಿಕೊಡುವ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ರ ಅಡಿಯಲ್ಲಿನ ಅಧಿಸೂಚನೆಯನ್ನು ಹಿಂಪಾಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಸಚಿವ ಸಂಪುಟ ಸಭೆ ಬಳಿಕ ಹೇಳಿದ್ದಾರೆ.
ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (DSPE) ಕಾಯಿದೆ, 1946 ರ ಸೆಕ್ಷನ್ 6 ರ ಪ್ರಕಾರ, ಕೇಂದ್ರೀಯ ತನಿಖಾ ದಳ (CBI) ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆಗಳನ್ನು ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಬಿಐ ಅಥವಾ ಕೇಂದ್ರ ಸರಕಾರ ತಮ್ಮ ಸಾಧನಗಳನ್ನು ಬಳಸುವಾಗ ಅವುಗಳನ್ನು ವಿವೇಚನೆಯಿಂದ ಬಳಸುತ್ತಿಲ್ಲ ಎಂಬುದು ಸ್ಪಷ್ಟವಾದ ಕಾರಣ ಈ ರೀತಿ ಮಾಡಲಾಗಿದೆ ಎಂದು ಹೆಚ್ ಕೆ ಪಾಟೀಲ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾವು ಸಿಬಿಐಗೆ ವಹಿಸಿದ್ದ ಎಲ್ಲಾ ಪ್ರಕರಣಗಳಲ್ಲಿ ಅವರು ಚಾರ್ಜ್ ಶೀಟ್ ಸಲ್ಲಿಸಿಲ್ಲ, ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯು ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಸೂಚನೆ ವಾಪಸ್ ಪಡೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ಪ್ರಕರಣವನ್ನು ಪರಿಶೀಲಿಸಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿಯನ್ನು ರಕ್ಷಿಸಲು ಈ ರೀತಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ‘ಸಿಎಂ ಮೇಲೆ ಲಕಾಯುಕ್ತ ತನಿಖೆಗೆ ನ್ಯಾಯಾಲಯದ ಆದೇಶವಿದೆ. ಈ ನಿರ್ಧಾರದಲ್ಲಿ ಅಂತಹ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Advertisement