ಬೆಂಗಳೂರು: ಉಚಿತ ಹೆಡ್ ಮಾಸಾಜ್ ಮಾಡಿಸಿಕೊಳ್ಳಲು ಹೋಗುತ್ತಿದ್ದ 30 ವರ್ಷದ ವ್ಯಕ್ತಿಯೊಬ್ಬರ ದೇಹದ ಎಡಭಾಗಕ್ಕೆ ಪಾರ್ಶ್ವವಾಯು ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಳ್ಳಾರಿ ಮೂಲದ ರಾಮ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು, ಎಂದಿನಂತೆ ಸಲೂನ್ ಗೆ ತೆರಳಿದ್ದಾರೆ, ಅಲ್ಲಿದ್ದ ಫ್ರೀ ಮಸಾಜ್ ಆಫರ್ ಗೆ ಮರುಳಾಗಿ ತಲೆಗೆ ಮಸಾಜ್ ಮಾಡಿಸಿಕೊಂಡಿದ್ದಾರೆ. ಸರಿಯಾದ ತರಬೇತಿಯಿಲ್ಲದ ಕ್ಷೌರಿಕ ಮಸಾಜ್ ಮಾಡುವಾಗ ಕುತ್ತಿಗೆ ತಿರುಚಿದ ಪರಿಣಾಮ ರಾಮ್ ಕುಮಾರ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಮಸಾಜ್ ಮಾಡಿಸಿಕೊಳ್ಳುವಾಗ ಬಲವಂತವಾಗಿ ಕುತ್ತಿಗೆ ತಿರುಚಿದ ಪರಿಣಾಮ ಅವರಿಗೆ ನೋವುಂಟಾಗಿದೆ. ಸ್ವಲ್ಪ ಸಮಯದ ನಂತರ ಸರಿಯಾಗಬಹುದೆಂದು ತಿಳಿದು ಮನೆಗೆ ಹೋಗಿದ್ದಾರೆ, ನೋವು ವಿಪರೀತವಾಗಿ ಕೆಲವೇ ಗಂಟೆಗಳಲ್ಲಿ, ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಎಡಭಾಗದಲ್ಲಿ ದೌರ್ಬಲ್ಯ ಉಂಟಾಗಿದೆ.
ಅಸ್ವಸ್ಥತೆ ಮುಂದುವರಿದಾಗ, ರಾಮ್‌ಕುಮಾರ್ ಆಸ್ಪತ್ರೆಗೆ ಧಾವಿಸಿದರು, ಅಲ್ಲಿ ಪರೀಕ್ಷಿಸಿದ ವೈದ್ಯರು ಬಲವಂತವಾಗಿ ಕುತ್ತಿಗೆ ತಿರುಚುವುದರಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ ಆಸ್ಟರ್ ಆರ್‌ವಿ ಆಸ್ಪತ್ರೆಯ ನರವಿಜ್ಞಾನದ ಹಿರಿಯ ಸಲಹೆಗಾರ ಡಾ.ಶ್ರೀಕಾಂತ ಸ್ವಾಮಿ ಮಾತನಾಡಿ, ರಾಮ್‌ಕುಮಾರ್ ಅವರು ಸಾಮಾನ್ಯ ಸ್ಟ್ರೋಕ್‌ಗಿಂತ ಭಿನ್ನವಾದ ಡಿಸೆಕ್ಷನ್-ಸಂಬಂಧಿತ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ, ಕುತ್ತಿಗೆ ರಕ್ತನಾಳದ ಗೋಡೆಯು ಹರಿದಿದೆ, ರಕ್ತದ ಹರಿವನ್ನು ಕಡಿಮೆ ಮಾಡಿ ಸ್ಟ್ರೋಕ್ ಉಂಟಾಗುವಂತೆ ಮಾಡಿದೆ. ನಂತರ ರಾಮ್ ಕುಮಾರ್ ಅವರಿಗೆ ಹೆಪ್ಪು ಗಟ್ಟಿದ್ದ ರಕ್ತತೆಳುವಾಗಿಸಲು ಚಿಕಿತ್ಸೆ ನೀಡಿ ಅವರ ಆರೋಗ್ಯ ಹದಗೆಡದಂತೆ ತಡೆಯಲಾಯಿತು. ಆದಾದ ನಂತರ ರಾಮ್ ಕುಮಾರ್ ಊರಿಗೆ ಹಿಂದಿರುಗಿದನು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡನು.
ಹಠಾತ್ ಮತ್ತು ಅಸಮರ್ಪಕ ಕುತ್ತಿಗೆ ತಿರುಗಿಸುವುದರಿಂದ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ, ಬಲವಂತದ ಟ್ವಿಸ್ಟ್ ರಕ್ತನಾಳದ ಗೋಡೆ ಹರಿದು ಹೋಗಿದೆ ಇದು ಹೆಪ್ಪುಗಟ್ಟಿ, ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಪಾರ್ಶ್ವವಾಯು ಉಂಟಾಗುತ್ತದೆ ಎಂದು ವೈದ್ಯ ರು ತಿಳಿಸಿದ್ದಾರೆ. ತರಬೇತಿ ಪಡೆದ ವೃತ್ತಿಪರರು ಮಾತ್ರ ಕುತ್ತಿಗೆ ಮಸಾಜ್ ನಿರ್ವಹಿಸಬೇಕು , ಕತ್ತಿನ ವ್ಯಾಯಾಮ ಮಾಡುವಾಗ ನಿಧಾನಕ್ಕೆ ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
Advertisement