ಕೆರಗೋಡು: ಆತಂಕ ಸೃಷ್ಟಿಸಿದ ಧ್ವಜಸ್ತಂಭ ತೆರವು ಆದೇಶ; ಮತ್ತೊಂದು ವಿವಾದ ಭುಗಿಲೇಳುತ್ತಿದ್ದಂತೆ ಜಿಲ್ಲಾಡಳಿತದಿಂದ ಸ್ಪಷ್ಟನೆ

ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಮುಂದುವರಿದಿರುವಾಗಲೇ, 108 ಅಡಿ ಎತ್ತರದ ಧ್ವಜಸ್ತಂಭವನ್ನೂ ತೆರವುಗೊಳಿಸಲು ಜಿಲ್ಲಾಡಳಿತದ ಆದೇಶಿಸಿದೆ ಎನ್ನಲಾದ ಸುದ್ದಿ ಶುಕ್ರವಾರ ಆತಂಕ ಸೃಷ್ಟಿಸಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಮುಂದುವರಿದಿರುವಾಗಲೇ, 108 ಅಡಿ ಎತ್ತರದ ಧ್ವಜಸ್ತಂಭವನ್ನೂ ತೆರವುಗೊಳಿಸಲು ಜಿಲ್ಲಾಡಳಿತದ ಆದೇಶಿಸಿದೆ ಎನ್ನಲಾದ ಸುದ್ದಿ ಶುಕ್ರವಾರ ಆತಂಕ ಸೃಷ್ಟಿಸಿತ್ತು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಧ್ವಜಸ್ತಂಭ ತೆರವುಗೊಳಿಸಿ ಜಾಗವನ್ನು ಸುಪರ್ದಿಗೆ ಪಡೆಯಬೇಕು, ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಜ.25ರಂದು ಹೊರಡಿಸಿದ್ದ ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ನಂತರ ಜ.29ರಂದು ಹೊರಡಿಸಲಾಗಿರುವ ‘ರಂಗಮಂದಿರದ ಮುಂಭಾಗದಲ್ಲಿರುವ ಧ್ವಜಸ್ತಂಭವನ್ನು ಸುಪರ್ದಿಗೆ ಪಡೆದು ಕ್ರಮ ವಹಿಸಬೇಕು’ ಎಂಬ ಸೂಚನೆ ನೀಡಿರುವ ತಿದ್ದುಪಡಿ ಆದೇಶ ಪ್ರತಿಯೂ ಹರಿದಾಡಿತ್ತು. ‘ತೆರವು’ ಪದ ತೆಗೆದು ಮಾಡಲಾದ ತಿದ್ದುಪಡಿ ಆದೇಶದಲ್ಲೂ ಸ್ಪಷ್ಟತೆ ಇಲ್ಲದ ಕಾರಣಕ್ಕೆ ಸಾರ್ವಜನಿಕರಲ್ಲಿ ಗೊಂದಲ ಮೂಡಿತ್ತು.

‘ಅಧಿಕಾರಿಗಳು ಶುಕ್ರವಾರವೇ ಧ್ವಜಸ್ತಂಭ ತೆರವುಗೊಳಿಸುತ್ತಾರೆ’ ಎಂಬ ಮಾಹಿತಿ ಹರಿದಾಡಿದ ಪರಿಣಾಮ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಡಳಿತದ ಕ್ರಮವನ್ನು ಸಾರ್ವಜನಿಕರು ಖಂಡಿಸಿದರು, ಶಾಸಕ ಗಣಿಗ ರವಿಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ‘ಧ್ವಜಸ್ತಂಭ ತೆರವುಗೊಳಿಸುವ ಯಾವುದೇ ಆದೇಶ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯವಲ್ಲ’ ಸ್ಪಷ್ಟನೆ ನೀಡಿದರು.
    
ಧ್ವಜಸ್ತಂಭ ವಿಚಾರ ಅತ್ಯಂತ ಸೂಕ್ಷ್ಮವಾಗಿದ್ದು, ಜಾಲತಾಣಗಳ ಸಂದೇಶದ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ. ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರುವ ವಿಡಿಯೊ, ಚಿತ್ರ, ಪ್ರಚೋದನಾಕಾರಿ ಹೇಳಿಕೆ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಕಠಿಣ ಕ್ರಮ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com