ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ: ಪಕ್ಷ ತೀರ್ಮಾನಿಸುತ್ತದೆ, ರಾಜಕೀಯ ಮಾಡಲು ಏನೂ ಇಲ್ಲ: ಡಿಕೆ ಶಿವಕುಮಾರ್
ಬೆಂಗಳೂರು: ಜನವರಿ 22ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆ ಸಮಾರಂಭಕ್ಕೆ ನನಗೆ ಅಥವಾ ಮುಖ್ಯಮಂತ್ರಿಗೆ ಆಹ್ವಾನ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಈ ನಿರೀಕ್ಷಿತ ಕಾರ್ಯಕ್ರಮಕ್ಕೆ ಹಾಜರಾಗುತ್ತದೆಯೇ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷವು ಈ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
'ನನಗೆ ಆಹ್ವಾನ ನೀಡಿಲ್ಲ. ನಮ್ಮ ಸಿಎಂ ಅವರಿಗಾಗಲಿ ಅಥವಾ ನನಗಾಗಲಿ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಬಂದಿಲ್ಲ. ನಮ್ಮ ಕಾಂಗ್ರೆಸ್ ಅಧ್ಯಕ್ಷರನ್ನು (ಮಲ್ಲಿಕಾರ್ಜುನ ಖರ್ಗೆ) ಆಹ್ವಾನಿಸಿರುವುದನ್ನು ನಾನು ನೋಡಿದೆ. ಆದರೆ, ಪಕ್ಷವು ಈ ಬಗ್ಗೆ ತೀರ್ಮಾನಿಸುತ್ತದೆ' ಎಂದು ಶಿವಕುಮಾರ್ ಹೇಳಿದರು.
'ನಾನು ಹಿಂದೂ; ನಾನು ರಾಮಭಕ್ತ; ನಾನೊಬ್ಬ ಹನುಮ ಭಕ್ತ. ನಾವೆಲ್ಲರೂ ಇಲ್ಲಿಂದಲೇ ಪ್ರಾರ್ಥಿಸುತ್ತೇವೆ. ನಮ್ಮೊಳಗೆ, ನಮ್ಮ ಹೃದಯದಲ್ಲಿ ನಾವು ರಾಮನನ್ನು ಹೊಂದಿದ್ದೇವೆ. ಇಲ್ಲಿ ರಾಜಕೀಯ ಮಾಡಲು ಏನೂ ಇಲ್ಲ' ಎಂದು ತಿಳಿಸಿದರು.
ಮೂಲಗಳ ಪ್ರಕಾರ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿದೆ ಎನ್ನಲಾಗಿದೆ. ಆದರೆ, ಪಕ್ಷದ ಹಾಜರಾತಿಯನ್ನು ಇನ್ನೂ ಖಚಿತಪಡಿಸಿಲ್ಲ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ಬಂದಿದೆ.
ಸಿಪಿಐಎಂ ಈಗಾಗಲೇ ಆಹ್ವಾನವನ್ನು ತಿರಸ್ಕರಿಸಿದೆ ಇತ್ತು ಇದನ್ನು 'ಧರ್ಮದ ರಾಜಕೀಯಗೊಳಿಸುವಿಕೆ' ಎಂದು ಕರೆದಿದೆ, ಆದರೆ ನಿತೀಶ್ ಕುಮಾರ್ ಅವರಿನ್ನೂ ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ