
ತುಮಕೂರು: ಭಾಷೆಯ ವಿಷಯದಲ್ಲಿ ದಕ್ಷಿಣದ ಮೇಲೆ ಉತ್ತರ ಭಾರತ ಪ್ರಾಬಲ್ಯ ಸಾಧಿಸುತ್ತಿದೆ, ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಜೋರಾಗುತ್ತಿದ್ದು, ಈ ಆರೋಪಗಳನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನಿರಾಕರಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರ 118 ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಉತ್ತರ ಭಾರತವು ದಕ್ಷಿಣದ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆ ಎಂಬ ಆರೋಪ ಆಧಾರರಹಿತವಾದದ್ದು. ಉತ್ತರ ಭಾರತಕ್ಕೆ ದಕ್ಷಿಣ ಭಾರತ ಹಲವಾರು ಸಂದರ್ಭಗಳಲ್ಲಿ ಆಧ್ಯಾತ್ಮಿಕ ರಂಗದಲ್ಲಿ ಮುನ್ನಡೆಸಿದೆ. ಧಾರ್ಮಿಕ ಕ್ಷೇತ್ರದಲ್ಲಿ ಕರ್ನಾಟಕವು ಉತ್ತರಕ್ಕೆ ಹಲವು ಬಾರಿ ಹೊಸ ದಿಕ್ಕನ್ನು ತೋರಿಸಿದೆ. ಹಾಗಿದ್ದರೂ, ಆರೋಪಗಳು ಕೇಳಿ ಬರುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಹೇಳಿದರು.
ಸಂರ್ಕೀರ್ಣ ಮನಸ್ಸಿನಿಂದ ಯಾರು ದೊಡ್ಡರಾಗುವುದಿಲ್ಲ, ಮನಸ್ಸು ಎಷ್ಟು ಶುದ್ಧವಾಗಿರುವುದರಿಂದ ಸುಖ ದೊರೆಯುತ್ತದೆ. ಸಾಧು, ಸಂತರ ಭೇಟಿಯಿಂದ ಮನಸ್ಸು ವಿಕಸಿತಗೊಳ್ಳುತ್ತಿದೆ. ಉತ್ತರ ಭಾರತ ದಕ್ಷಿಣ ಭಾರತದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ದಕ್ಷಿಣ ಭಾರತ ಭಾರತದ ಆಧ್ಯಾತ್ಮಿಕತೆ ದೊಡ್ಡ ಮಾರ್ಗದರ್ಶನ ಮಾಡಿದೆ. ಅದಕ್ಕೆ ಶಂಕರಾಚಾರ್ಯರು ನಿದರ್ಶನವಾಗಿದೆ.
ಕಾಶಿಯ ಆಚಾರ್ಯ ಮಂದನ್ ಮಿಶ್ರಾ ಮತ್ತು ಆದಿ ಶಂಕರಾಚಾರ್ಯರ ಕುರಿತ ಚರ್ಚೆಯೇ ಇದಕ್ಕೆ ಉದಾಹಣೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಸಿದ್ಧವಾದ ಚರ್ಚೆಯಾಗಿದೆ. ಚರ್ಚೆಯಲ್ಲಿ ಶಂಕರಾಚಾರ್ಯರು ಮಂದನ್ ಮಿಶ್ರಾ ಅವರನ್ನು ಸೋಲಿಸಿದ್ದರು. ಭಾರತದ ಸಂಪ್ರದಾಯವು ಜ್ಞಾನದ ಬಗ್ಗೆ ಉದಾರವಾಗಿತ್ತು. ಸತ್ಯವನ್ನು ಸ್ವೀಕರಿಸಲು ಎಂದಿಗೂ ಹಿಂಜರಿಯಲಿಲ್ಲ ಎಂಬುದನ್ನು ಈ ಚರ್ಚೆ ತೋರಿಸಿತ್ತು. ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಹಲವರು ಪ್ರಯತ್ನ ನಡೆಸಿದ್ದರು. ಆ ಪ್ರಯತ್ನಗಳ ನಡುವಲ್ಲೂ ಸಂತರು ದೇಶದ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಂತಹ ಸಂತರಿಂದಾಗಿ ನಮ್ಮ ಸಂಸ್ಕೃತಿ ಜೀವಂತವಾಗಿದೆ. ಶಿವಕುಮಾರ ಸ್ವಾಮೀಜಿ ಭಾರತದ ಶ್ರೇಷ್ಠ ಸಂತ ಪರಂಪರೆಯ ಹರಿಕಾರರಷ್ಟೇ ಅಲ್ಲ, ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು. ಅವರ ಸಮಾಜ ಕಲ್ಯಾಣ ಕಾರ್ಯಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಸಂತರ ವ್ಯಾಖ್ಯಾನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಉತ್ತಮ ಸಾಂಸ್ಕೃತಿಕ ಮೌಲ್ಯಗಳನ್ನು ಸ್ಥಾಪಿಸಿದವರಾಗಿದ್ದಾರೆ, ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ. ಬಲವಾದ ರಾಷ್ಟ್ರವನ್ನು ನಿರ್ಮಿಸಲು ಸಾಮಾಜಿಕ ಸೇವೆ ಮಾಡಿದ್ದಾರೆಂದು ಕೊಂಡಾಡಿದರು.
ಇದಕ್ಕೂ ಮೊದಲು ಶ್ರೀ ಶಿವಕುಮಾರ ಸ್ವಾಮೀಜಿಯ 'ಗದ್ದುಗೆ' (ಸಮಾಧಿ) ಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ವೈದ್ಯಕೀಯ ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳು ಸೇರಿದಂತೆ 128 ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸಿದ್ದಗಂಗಾ ಮಠವು ಎಲ್ಲಾ ವರ್ಗ, ಜಾತಿ ಮತ್ತು ಧರ್ಮದ 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವ ಮೂಲಕ ಗುರುಕುಲದ ಸಂಪ್ರದಾಯವನ್ನು ಮುಂದುವರಿಸುತ್ತಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮಠವು ಸಂಸ್ಕೃತ ಕಾಲೇಜನ್ನು ಸಹ ಪ್ರಾರಂಭಿಸಿದೆ. ಇದು ಅತ್ಯಂತ ಶ್ಲಾಘನೀಯ. ಸಂಸ್ಕೃತದಿಂದ ಎಂಜನಿಯರಿಂಗ್ ಶಿಕ್ಷಣ ನೀಡುತ್ತಿದೆ. ಸಂಸ್ಕೃತ ಇದು ಭಾರತದ ಹೊರಗೂ ಪ್ರಚಲಿತವಾಗಿದೆ. ಸಿದ್ಧಗಂಗಾ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ,ಆಶ್ರಯ ದಾಸೋಹವನ್ನು ನಡೆಸಲಾಗುತ್ತಿದೆ. ಇದು ಸಾಂಸ್ಕೃತಿಕ, ಶೈಕ್ಷಣಿಕ, ಸಮಾಜಸೇವೆಯ ತಾಣವಾಗುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದರು.
ಆತ್ಮನಿರ್ಬರ ಭಾರತ ನಿರ್ಮಾಣಕ್ಕಾಗಿ ಸಾಧುಸಂತರ ತತ್ವಾದರ್ಶಗಳನ್ನು ಅನುಸರಿಸಬೇಕಿದೆ. ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ವ್ಯಕ್ತಿತ್ವ ಬದಲಿಸಿಕೊಂಡಿದೆ. ಅಧರ್ಮ ನಾಶ ಮಾಡುವ, ದೇಶದ ಒಳಿತಿಗೆ ದುಡಿಯುವ, ಮಾನವನ ಕಲ್ಯಾಣಕ್ಕೆ ಬದುಕನ್ನು ಅರ್ಪಿಸಿಕೊಂಡು ಸಂತ ಶಿವಕುಮಾರಸ್ವಾಮೀಜಿ ಎಂದರು.
ಆರ್ಥಿಕ, ಭೌತಿಕ, ಆಧ್ಯಾತ್ಮಿಕ ಸೇವೆಯನ್ನು ನೀಡಬೇಕಿದೆ. ಮನಸ್ಸನ್ನು ವಿಕಸಿತಗೊಳಿಸುವುದೇ ಆಧ್ಯಾತ್ಮಿಕತೆ. ಶ್ರೀಗಳ ಆಧ್ಯಾತ್ಮಿಕಯಿಂದಲೇ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾದರೂ. ಶಿಕ್ಷಣದ ಉದ್ದೇಶ ಉದ್ಯೋಗಗಳಿಸುವುದಲ್ಲ, ವಿಕಸಿತ ವ್ಯವಸ್ಥಿತ ಮಾಡುವುದೇ ಆಗಿದೆ. ಶಿಕ್ಷಣದಿಂದ ಆರ್ಟಿ ಅಫಿಶಿಯಲ್ ಇಂಟೆಲಿಜೆನ್ಸ್ ನಿರ್ಮಾಣ ಮಾಡಬಹುದು ಆದರೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸಾಧ್ಯವಿಲ್ಲ. ಸಿದ್ಧಗಂಗಾ ಮಠ ಮಕ್ಕಳಿಗೆ ಸಂಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣ ನೀಡುತ್ತಿದೆ ಎಂದು ಅವರು ಹೇಳಿದರು
Advertisement