
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಚಿನ್ನಾಭರಣ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ರೂ. 40 ಕೋಟಿಗೂ ಅಧಿಕ ಮೌಲ್ಯದ 49 ಕೆಜಿ ಚಿನ್ನ ಮಾರಾಟ ಮಾರಾಟ ಮಾಡಲು ಸಹಾಯ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು DRI ಹೇಳಿದೆ.
ಕಳ್ಳಸಾಗಣೆಯಲ್ಲಿ ಚಿನ್ನವನ್ನು ಮಾರಾಟ ಮಾಡುವಲ್ಲಿ ಮತ್ತು ಹವಾಲಾ ವಹಿವಾಟುಗಳನ್ನು ನಿರ್ವಹಿಸುವಲ್ಲಿ ಜೈನ್, ರನ್ಯಾರಾವ್ ಗೆ ನೆರವಾಗಿದ್ದಾನೆ ಎಂದು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ DRI ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಹೇಳಲಾಗಿದೆ. ಮಾರ್ಚ್ 26 ರಂದು ಬಂಧಿಸಲಾಗಿರುವ ಜೈನ್ ನನ್ನು ಏಳುದಿನಗಳ ಪೊಲೀಸ್ ಕಸ್ಟಡಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ಮತ್ತೆ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹವಾಲಾ ವಹಿವಾಟು: ರನ್ಯಾ ರಾವ್ ಸುಮಾರು ರೂ. 40 ಕೋಟಿ ಮೌಲ್ಯದ 49. 6 ಕೆಜಿ ಚಿನ್ನ ವಿಲೇವಾರಿಗಾಗಿ ಮತ್ತು ದುಬೈಗೆ ರೂ. 38. 4 ಕೋಟಿ ಹವಾಲಾ ಹಣವನ್ನು ವರ್ಗಾಯಿಸಲು ಜೈನ್ ಸಹಾಯ ನೀಡಿರುವುದು ಸ್ಪಷ್ಪವಾಗಿದೆ. ಬೆಂಗಳೂರಿನಲ್ಲಿರುವ ನಟಿಗೆ ರೂ. 1,73,61,787 ಹಣ ವರ್ಗಾಯಿಸಿದ್ದು, ಪ್ರತಿಯೊಂದು ವ್ಯವಹಾರಕ್ಕೂ ರೂ. 55,000 ಕಮಿಷನ್ ಪಡೆದಿರುವುದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ DRI ತಿಳಿಸಿದೆ.
ಸಾಹಿಲ್ ಸಕಾರಿಯಾ ಜೈನ್‌ಗೆ ಸೇರಿದ ಎರಡು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ನಿಂದ ಹೊರತೆಗೆಯಲಾದ ಮಾಹಿತಿಯಲ್ಲಿ ರನ್ಯಾರಾವ್ ಭಾರತಕ್ಕೆ ದೊಡ್ಡ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡುವಲ್ಲಿ ಆತನ ಪಾತ್ರವನ್ನು ಸ್ಪಷ್ಪಪಡಿಸಿರುವುದಾಗಿ ತನಿಖಾ ಏಜೆನ್ಸಿ ಮಾಹಿತಿ ನೀಡಿದೆ.
ಜನವರಿ 2025 ರಲ್ಲಿ ಜೈನ್ ರೂ. 11.56 ಕೋಟಿ ಮೌಲ್ಯದ 14.568 ಕೆಜಿ ಚಿನ್ನವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದ. ಹವಾಲಾ ವಹಿವಾಟಿನಲ್ಲಿ 11.01 ಕೋಟಿ ರೂಪಾಯಿಗಳನ್ನು ದುಬೈಗೆ ವರ್ಗಾಯಿಸುವಲ್ಲಿ ನೆರವಾಗಿದ್ದ ಅಲ್ಲದೇ. ಬೆಂಗಳೂರಿನಲ್ಲಿ 55 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಫೆಬ್ರವರಿ 2025ರಲ್ಲಿ ರೂ. 11. 81 ಕೋಟಿ ಮೊತ್ತದ 13, 433 ಕೆಜಿ ಚಿನ್ನ ವಿಲೇವಾರಿಗೆ ಜೈನ್ ನಟಿಗೆ ನೆರವಾಗಿದ್ದ. ಅದೇ ತಿಂಗಳು ರೂ. 11. 25ಕೋಟಿ ಹವಾಲಾ ಹಣವನ್ನು ದುಬೈಗೆ ಮತ್ತು ರೂ. 55. 81 ಲಕ್ಷವನ್ನು ರನ್ಯಾ ರಾವ್ ಗೆ ಕಳುಹಿಸುವಲ್ಲಿ ಸಹಾಯ ಹಸ್ತ ಚಾಚಿದ್ದ ಎಂದು DRI ತಿಳಿಸಿದೆ.
ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯ ಮಲಮಗಳು ರನ್ಯಾ ಅವರನ್ನು ಮಾರ್ಚ್ 3 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಡಿಐಆರ್ ಅಧಿಕಾರಿಗಳು, ಆಕೆಯ ಬಳಿಯಿದ್ದ 14.7 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದರು. ತದನಂತರ ಚಿನ್ನ ಕಳ್ಳಸಾಗಣೆ ವ್ಯವಹಾರ ಕುರಿತು ದಿನದಿಂದ ದಿನದಿಂದ ಹೊಸ ಹೊಸ ಮಾಹಿತಿ ದೊರೆಯುತ್ತಿದೆ.
Advertisement