ಬೇಸಿಗೆ ಧಗೆಯಿಂದ ಹೈರಾಣಾಗಿದ್ದ ಬೆಂಗಳೂರಿಗರಿಗೆ ಇಂದು ವರುಣ ತಂಪೆರೆದಿದ್ದಾನೆ. ಇಂದು ಬೆಳಗ್ಗೆಯಷ್ಟೇ ಹವಾಮಾನ ಇಲಾಖೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ವಿಧಾನಸೌಧ, ಶಿವಾಜಿ ನಗರ, ಹೆಚ್ಎಸ್ ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಜಯನಗರ, ಆರ್ ಆರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಹಲವೆಡೆ ಮರಗಳು ಧರೆಗುರುಳಿದ್ದು ಮನೆ, ಕಾರುಗಳು ಜಖಂಗೊಂಡಿವೆ. ರಸ್ತೆ ಮಧ್ಯೆ ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಮತ್ತೆರೆಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಮಧ್ಯರಾತ್ರಿ ಕೆಆರ್ ಪುರಂ ರೈಲ್ವೆ ಸ್ಟೇಷನ್ನಿಂದ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ ಮೂಲದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ಮಾಡಲಾಗಿದ್ದು ಘಟನೆ ಸಂಬಂಧ ಮಹದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಈ ವೇಳೆ ಯುವತಿಯನ್ನು ಅಪಹರಿಸಿದ ಆರೋಪಿಗಳಾದ ಸೈಯದ್ ಮಸೂರ್ ಹಾಗೂ ಆಸಿಫ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಇನ್ನು ಯುವತಿ ಕೂಗಿಕೊಂಡಿದ್ದರಿಂದ ಸ್ಥಳೀಯರು ಆಗಮಿಸಿದ್ದ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಫ್ರೀಡಂ ಪಾರ್ಕ್'ನಲ್ಲಿ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ಅನಂತರ ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ತಿಂಗಳ 5ರಂದು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ನಡೆಸಲಿದೆ. ಬಳಿಕ 7ರಿಂದ ಬೆಲೆ ಏರಿಕೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿಯು ಜನಾಕ್ರೋಶ ಯಾತ್ರೆ ಆರಂಭಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರಿನ ಜೆ.ಪಿ.ನಗರದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿಯ ಹೈವೇ ಎಕ್ಸಿಟ್ನಲ್ಲಿ ನಡೆದಿದೆ. ಸೋದರಮಾವನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮೃತರನ್ನು ಸತ್ಯಾನಂದ ರಾಜೇ ಆರಸ್ ಅವರ ಪತ್ನಿ ನಿಶ್ಚಿತಾ, ಚಂದ್ರು ಅವರ ಪತ್ನಿ ಸುವೇದಿನಿ ರಾಣಿ ಎಂದು ಗುರುತಿಸಲಾಗಿದೆ. ಎಕ್ಸ್ಪ್ರೆಸ್ ಹೈವೇಯಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲವಾಗಿದೆ. ಹೀಗಾಗಿ ಮತ್ತೆ ಎಕ್ಸ್ಪ್ರೆಸ್ ಹೈವೇಗೆ ಚಾಲಕ ಕಾರು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಐರಾವತ ಬಸ್ ಡಿಕ್ಕಿ ಹೊಡೆದಿತ್ತು.
ಬೆಂಗಳೂರಿನ ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನ ಮನೆಯೊಂದರಲ್ಲಿ ಬೆಳಗ್ಗೆ ಚಿರತೆ ನುಗ್ಗಿದೆ. ಬೆಳಗ್ಗೆ ಎದ್ದ ಕೂಡಲೇ ವೆಂಕಟೇಶ್ ಎಂಬುವರಿಗೆ ಚಿರತೆ ಕಣ್ಣಿಗೆ ಬಿದ್ದಿದೆ. ಇದರಿಂದ ಬೆಚ್ಚಿಬಿದ್ದ ವೆಂಕಟೇಶ್ ದಂಪತಿ, ಕೂಡಲೇ ಎದ್ದು ಮನೆಯಿಂದ ಆಚೆ ಬಂದು ಬಾಗಿಲು ಲಾಕ್ ಮಾಡಿದ್ದಾರೆ. ನಂತರ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೊಲೀಸ್ ಹಾಗು ಅರಣ್ಯ ಇಲಾಖೆಯವರು ದೌಡಾಯಿಸಿ, ಮನೆಯಲ್ಲಿ ಲಾಕ್ ಆಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಜ್ಞ ವೈದ್ಯ ಕಿರಣ್ ಚಿರತೆಗೆ ಅರವಳಿಕೆ ಇಂಜೆಕ್ಷನ್ ಡಾಟ್ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಬೋನಿಗೆ ಶಿಫ್ಟ್ ಮಾಡಿ ಅರಣ್ಯ ಇಲಾಖೆ ಕೊಂಡೊಯ್ದರು.
ಕಳೆದ 50 ವರ್ಷಗಳಿಂದ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ, ಸಂಶೋಧಕ ಹಾಗೂ ಸಾಹಿತಿ ಪಿ ವಿ ನಾರಾಯಣ ಅವರು ಗುರುವಾರ ವಯೋಸಹಜ ಕಾಯಿಲೆಗಳಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ನಾರಾಯಣ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಜನಿಸಿದ್ದರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಅಧ್ಯಾಪಕರಾಗಿದ್ದ ನಾರಾಯಣ, ಅನುವಾದಕರಾಗಿ ಇಂಗ್ಲಿಷ್ ಮತ್ತು ತೆಲುಗಿನಿಂದ 22 ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
Advertisement