
ಬೆಂಗಳೂರು: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ತಿದ್ದುಪಡಿಯಿಂದ ರೈತರಿಗೆ, ಮಠಗಳಿಗೆ, ದೇವಸ್ಥಾನಗಳಿಗೆ, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ ಹಾಗೂ ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮೂಹಿಕ ಹೋರಾಟಕ್ಕೆ ಜಯ ಸಂದಿರುವುದು ಸಾಕಷ್ಟು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ್ ನ ನಿರಂಕುಶ ನಡೆಗಳಿಗೆ ಕಡಿವಾಣ ಹಾಕಲಿದೆ. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಗೆ ಜಂಟಿ ಸಂಸತ್ ಸಮಿತಿ ರಚಿಸಿ ತಿದ್ದುಪಡಿಗೆ ಸೂಚಿಸಿದ ಕೇಂದ್ರ ಸರ್ಕಾರಕ್ಕೂ, ಜೆ.ಪಿ.ಸಿ ಅಧ್ಯಕ್ಷರಿಗೂ, ಸದಸ್ಯರಿಗೂ ಸೇರಿದಂತೆ ತಿದ್ದುಪಡಿಗೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.
ತಿದ್ದುಪಡಿಯಿಂದ ರೈತರಿಗೆ, ಮಠಗಳಿಗೆ, ದೇವಸ್ಥಾನಗಳಿಗೆ, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ ಹಾಗೂ ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮೂಹಿಕ ಹೋರಾಟಕ್ಕೆ ಜಯ ಸಂದಿರುವುದು ಸಾಕಷ್ಟು ಸಂತಸ ತಂದಿದೆ. ವಿಜಯಪುರದಲ್ಲಿ ನಮ್ಮ ತಂಡದಿಂದ ಮೊಳಗಿದ ಹೋರಾಟ ರಾಷ್ಟ್ರವ್ಯಾಪಿ ಹರಡಿದ್ದು ಸ್ಮರಿಸಬಹುದು.
ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ನಾಯಕರಿಗೆ, ಮಠಾಧೀಶರಿಗೆ, ಜನಸಾಮಾನ್ಯರಿಗೆ, ವಿಜಯಪುರದಲ್ಲಿ ಧರಣಿ ಮಾಡುತ್ತಿರುವಾಗ ದೂರ-ದೂರುಗಳಿಂದ ರೊಟ್ಟಿ ಊಟ ಕೊಟ್ಟ ಅನ್ನದಾತರಿಗೆ, ಹೆಬ್ಬಂಡೆಯಂತೆ ನಿಂತ ನಮ್ಮ ತಂಡದ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದ್ದಾರೆ.
Advertisement