ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ತನ್ನ ವಿರುದ್ಧ ಎಫ್ ಐಆರ್ ದಾಖಲಾಗಿದ್ದಕ್ಕೆ ಮನನೊಂದು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ರಾಜಕೀಯ ಪ್ರೇರಿತ ಎಫ್ ಐ ಆರ್ ನಿಂದ ಮನನೊಂದು ಸಾವನ್ನಪ್ಪುತ್ತಿರುವುದಾಗಿ ವಿನಯ್ ಸೋಮಯ್ಯ ಡೆತ್ ನೋಟ್ ಬರೆದಿದ್ದಾರೆ. ಈತ ಶಾಸಕ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡ ತೆನ್ನೇರ ಮೈನಾ, ವಿನಯ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಬಂಧನವಾಗಿತ್ತು, ನಂತರ ಅವರು ಜಾಮೀನು ಪಡೆದಿದ್ದರು. "ರಾಜಕೀಯ ಪ್ರೇರಿತ ಎಫ್‌ಐಆರ್‌ಗಳನ್ನು ದಾಖಲಿಸುವುದರ ವಿರುದ್ಧ ಪಾಠವಾಗಬೇಕು" ಎಂದು ಡೆತ್ ನೋಟ್ ನಲ್ಲಿ ವಿನಯ್ ಸೋಮಯ್ಯ ಬರೆದಿದ್ದಾರೆ. ಈ ಡೆತ್ ನೋಟ್ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವಿನಯ್ ಸೋಮಯ್ಯ ತಮ್ಮ ಟಿಪ್ಪಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ತೆನ್ನೇರ ಮೈನಾ, ಕಾಂಗ್ರೆಸ್ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಮಂಥರ್ ಗೌಡ ಅವರ ಹೆಸರುಗಳನ್ನು ಸಹ ಉಲ್ಲೇಖಿಸಿದ್ದಾರೆ.
ವಿನಯ್ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೆ, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯವಲ್ಲ, ಸಂಬಂಧಪಟ್ಟ ಡಿಸಿಪಿ ಈ ಪ್ರಕರಣದ ತನಿಖೆ ಮಾಡುತ್ತಾರೆ. ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಶಾಸಕ ಪೊನ್ನಣ್ಣ, ಮಂಥರ್ ಗೌಡ ಹೆಸರನ್ನು ಕೈಬಿಟ್ಟಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿನಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್'ಗೆ ಕಾನೂನು ನೆರವು ನೀಡದೆ ಈಗ ಟ್ವಿಟರ್ ನಲ್ಲಿ ಆರ್ಭಟಿಸುತ್ತಿರುವುದನ್ನು ನೋಡಿದರೆ, ನಿಮ್ಮ ಆದ್ಯತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ತಮಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬೆನ್ನಲ್ಲೇ ಬೆದರಿಕೆ ಕರೆ ಬಂದಿದ್ದು, ಅನ್ವರ್ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ವಿಚಾರ ಕೂಡ ಪ್ರಸ್ತಾಪ ಮಾಡಿದ್ದರು. ಇಂಟರ್ನೆಟ್ ಕರೆ ಮೂಲಕ ನನಗೆ ನಿರಂತರ ಬೆದರಿಕೆ ಬರುತ್ತಾ ಇದೆ. ಕರೆ ಮಾಡಿದ ವ್ಯಕ್ತಿ ನೀವು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಾಣಿಪ್ಪಾಡಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಿದ್ಧಾಂತದ ಪರವಾಗಿ ಆಕ್ರಮಣಕಾರಿಯಾಗಿ ಧ್ವನಿ ಎತ್ತುವ ಉತ್ತಮ ವಾಗ್ಮಿಗಳನ್ನು ಎಂಎಲ್‌ಸಿಗಳಾಗಿ ನಾಮನಿರ್ದೇಶನ ಮಾಡಲಾಗುವುದು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ ತಲುಪಿದೆ ಎಂದು ತಿಳಿಸಿದ ಶಿವಕುಮಾರ್, ಮೇಲ್ಮನೆಯಲ್ಲಿ ಬಿಜೆಪಿ ಉತ್ತಮ ವಾಗ್ಮಿಗಳನ್ನು ಹೊಂದಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಎದುರಿಸಲು ಬಯಸುತ್ತದೆ. ಪರಿಷತ್ ಅಭ್ಯರ್ಥಿಗಳ ಆಯ್ಕೆ ಕುರಿತು ಈಗಾಗಲೇ ಎರಡು ಸುತ್ತಿನ ಚರ್ಚೆಗಳು ನಡೆದಿವೆ. ಹೆಚ್ಚಿನ ಚರ್ಚೆ ಅಗತ್ಯವಿದೆ ಎಂದರು.
ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು.
Advertisement