
ಬೆಂಗಳೂರು: ಪ್ರವಾಸೋದ್ಯಮ ಮತ್ತು ಅರಣ್ಯ ಭೂಮಿ ಅತಿಕ್ರಮಣವನ್ನು ನಿಯಂತ್ರಿಸುವ ಉದ್ದೇಶದಿಂದ, ಬಂಡೀಪುರ ಹುಲಿ ಮೀಸಲು ಪ್ರದೇಶದ ಬಳಿ ಹೊಸ ರೆಸಾರ್ಟ್, ಹೋಟೆಲ್ ಅಥವಾ ಹೋಂಸ್ಟೇ ಅನ್ನು ಪ್ರಾರಂಭಿಸುವ ಮೊದಲು ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಲ್ಲದೆ, ಹೊಸ ಆಸ್ತಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಯ ಕಾರ್ಯ ಯೋಜನೆಗೆ ಅನುಗುಣವಾಗಿರಬೇಕು.
ಪ್ರವಾಸೋದ್ಯಮವನ್ನು ಮತ್ತಷ್ಟು ನಿಯಂತ್ರಿಸಲು, ಹುಲಿ ಮೀಸಲು ಪ್ರದೇಶದೊಳಗೆ ಅಸ್ತಿತ್ವದಲ್ಲಿರುವ ಅತಿಥಿ ಗೃಹಗಳನ್ನು ಮುಚ್ಚುವ ಬಗ್ಗೆಯೂ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ. ಹುಲಿ ಮೀಸಲು ಪ್ರದೇಶದ ಒಳಗೆ ವಾಸ್ತವ್ಯಕ್ಕೆ ಅನುಮತಿ ನೀಡದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದಿಂದ ಮಾರ್ಗಸೂಚಿಗಳಿವೆ. ಬಂಡೀಪುರದಲ್ಲಿ ಅಧಿಕಾರಿಗಳು ಈಗ ಈ ಕೆಲಸವನ್ನು ಪ್ರಾರಂಭಿಸಿದ್ದಾರೆ. ನಾಗರಹೊಳೆಯಲ್ಲೂ ಇಲಾಖೆಯ ಅತಿಥಿ ಗೃಹಗಳಲ್ಲಿ ವಾಸ್ತವ್ಯಕ್ಕಾಗಿ ಬುಕಿಂಗ್‌ಗಳನ್ನು ಆಯ್ದ ಸ್ಥಳಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಅರಣ್ಯದ ಹೊರಗಿನ ಆಸ್ತಿಗಳ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಿಟಿಆರ್)ದ ನಿರ್ದೇಶಕ ಎಸ್ ಪ್ರಭಾಕರನ್ ಅವರು “ನಾವು ಅಸ್ತಿತ್ವದಲ್ಲಿರುವ ಆದೇಶವನ್ನು ಮಾತ್ರ ಮರುಸ್ಥಾಪಿಸಿದ್ದೇವೆ. ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಅರಣ್ಯ ಇಲಾಖೆ ಸೇರಿದಂತೆ ಸೂಕ್ತ ಅನುಮೋದನೆಗಳನ್ನು ಹೊಂದಿರಬೇಕು ಎಂದು ಈಗಾಗಲೇ ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅತಿಕ್ರಮಣಗೊಂಡ ಭೂಮಿಯಲ್ಲಿರುವ ಎಲ್ಲರನ್ನೂ ಸ್ಥಳಾಂತರಿಸಬೇಕಾಗುತ್ತದೆ” ಎಂದಿದ್ದಾರೆ.
ಹೋಟೆಲ್, ರೆಸಾರ್ಟ್‌ಗಳ ಪರವಾನಗಿಗಳ ನವೀಕರಣಕ್ಕೂ ಅರಣ್ಯ ಇಲಾಖೆಯ ಅನುಮೋದನೆಯ ಅಗತ್ಯವಿರುತ್ತದೆ. ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಇಲಾಖೆಯು ಯಾವುದೇ ಹೊಸ ಅನುಮತಿ ನೀಡದಿರಲು ಯೋಚಿಸುತ್ತಿದೆ ಎಂದಿದ್ದಾರೆ.
ಅರಣ್ಯ ಅಂಚಿನಲ್ಲಿರುವ ಭೂಮಿಗಳ ಸಮೀಕ್ಷೆಯನ್ನು ಸಹ ಮಾಡಲಾಗುತ್ತಿದೆ. ಅರಣ್ಯ ಅಂಚಿನಲ್ಲಿ ಹೆಚ್ಚುತ್ತಿರುವ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳನ್ನು ನಿಯಂತ್ರಿಸುವ ಪ್ರಕ್ರಿಯೆ ಒಂದು ದಶಕದ ಹಿಂದೆಯೇ ಪ್ರಾರಂಭವಾಗಿತ್ತು ಮತ್ತು ಈ ಸಮಸ್ಯೆಯನ್ನು ಅಧಿವೇಶನದಲ್ಲಿಯೂ ಸಹ ಪ್ರಸ್ತಾಪ ಮಾಡಲಾಗಿದೆ. ಹಂಪಿ ಬಳಿಯ ಕೊಪ್ಪಳದಲ್ಲಿ ಇತ್ತೀಚೆಗೆ ಇಸ್ರೇಲಿ ಮತ್ತು ಒಡಿಶಾ ಪ್ರವಾಸಿಗರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ, ರಾಜ್ಯ ಸರ್ಕಾರವು ಅಕ್ರಮ ಹೋಂ ಸ್ಟೇಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮೇಲೆ ಚಾಟಿ ಬೀಸಿರುವುದರಿಂದ; ಅರಣ್ಯ ಇಲಾಖೆ ಅಧಿಕಾರಿಗಳು ಸಹ ಎಚ್ಚೆತ್ತುಕೊಂಡಿದ್ದಾರೆ.
Advertisement