
ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕಲು ಒತ್ತಡ ಹೆಚ್ಚುತ್ತಿರುವಂತೆ, ಪರಿಸರವಾದಿಗಳು ಮತ್ತು ವನ್ಯಜೀವಿ ಕಾರ್ಯಕರ್ತರು ಈ ಕ್ರಮವನ್ನು ವಿರೋಧಿಸಲು ಒಗ್ಗೂಡುತ್ತಿದ್ದಾರೆ.
ಅರಣ್ಯ ಮತ್ತು ಅದರ ವನ್ಯಜೀವಿಗಳನ್ನು ರಕ್ಷಿಸಲು ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸಲು ಒತ್ತಾಯಿಸಿ ಅವರು ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ. ಭಾನುವಾರ ಬಂಡೀಪುರದಲ್ಲಿ ಸಭೆ ಸೇರಿ ಉದ್ಯಾನವನ ರಕ್ಷಿಸಲು ತಮ್ಮ ಮುಂದಿನ ಕ್ರಮಗಳ ಬಗ್ಗೆ ಯೋಜಿಸಲು ನಿರ್ಧರಿಸಿದ್ದಾರೆ.
ಜೊತೆಗೆ ನಿಷೇಧವನ್ನು ತೆಗೆದುಹಾಕುವುದರಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿಂದೆ ಇದೇ ರೀತಿಯ ಪ್ರಸ್ತಾಪಗಳನ್ನು ವಿರೋಧಿಸಲು 'ಬಂಡೀಪುರವನ್ನು ಉಳಿಸಿ' ಅಭಿಯಾನವನ್ನು ಪ್ರಾರಂಭಿಸಲಾಗಿತ್ತು,
ರಾತ್ರಿ ಸಂಚಾರ ನಿಷೇಧವನ್ನು ಪರಿಚಯಿಸಿದಾಗಿನಿಂದ, ಹೆದ್ದಾರಿಯಲ್ಲಿ ಪ್ರಾಣಿಗಳ ಸಾವುನೋವುಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ. ಹತ್ತಿರದ ಹಳ್ಳಿಗಳಲ್ಲಿ ಮಾನವ-ಪ್ರಾಣಿ ಸಂಘರ್ಷದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅವರು ವಾದಿಸುತ್ತಾರೆ. ನಿಷೇಧವನ್ನು ತೆಗೆದುಹಾಕುವುದರಿಂದ ಹುಲಿ ಮೀಸಲು ಪ್ರದೇಶ ಮತ್ತು ಸುತ್ತಮುತ್ತಲಿನ ಅರಣ್ಯ ಎರಡಕ್ಕೂ ಬೆದರಿಕೆ ಉಂಟಾಗಬಹುದು ಎಂದು ಪರಿಸರವಾದಿಗಳ ಆತಂಕವಾಗಿದೆ.
ರಾತ್ರಿ ಸಂಚಾರ ನಿಷೇಧ ತೆಗೆದುಹಾಕುವುದರಿಂದ ನೆರೆಯ ಕೇರಳ ರಾಜ್ಯದಂತೆಯೇ ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತವೆ ಹಾಗೂ ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಮರಣ ಶಾಸನವಾಗಿರುತ್ತದೆ ಎಂದು ಅವರು ಹೇಳಿದರು.
ರಾತ್ರಿ ಸಂಚಾರ ನಿಷೇಧ ವಿಷಯವು ಸೂಕ್ಷ್ಮವಾಗಿದ್ದು, ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಕಾನೂನು ಅಭಿಪ್ರಾಯವನ್ನು ಪಡೆದು ಚರ್ಚಿಸುವುದಾಗಿ ಹೇಳಲಾಗಿದೆ. ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕುವಂತೆ ರಾಜ್ಯ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸಿದ್ದಾರೆ ಎಂದು ಭಾವಿಸಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.
ಸರ್ಕಾರ ನಿಷೇಧವನ್ನು ತೆಗೆದುಹಾಕಲು ಮುಂದಾದರೆ, ವಿಶೇಷವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯ ವಿಚಾರಣೆಗೆ ಬರಲಿರುವ ಕಾರಣ ತೀವ್ರ ಪ್ರತಿಭಟನೆ ಪ್ರಾರಂಭಿಸಲಾಗುವುದು ಎಂದು ವನ್ಯಜೀವಿ ಕಾರ್ಯಕರ್ತ ಎಸ್ ನಾಗಾರ್ಜುನಸ್ವಾಮಿ ತಿಳಿಸಿದ್ದಾರೆ.
ಈ ಮಧ್ಯೆ, ಬಂಡೀಪುರದೊಳಗೆ ಸುರಂಗ ರಸ್ತೆ ನಿರ್ಮಿಸುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಗೆ ಸಂಪೂರ್ಣವಾಗಿ ತಿರಸ್ಕರಿಸಿದ್ದರು ಎಂಬುದನ್ನು ವನ್ಯಜೀವಿ ಕಾರ್ಯಕರ್ತ ಜೋಸೆಫ್ ಹೂವರ್ ನೆನಪಿಸಿಕೊಂಡರು. ಜನರು ಮತ್ತು ವನ್ಯಜೀವಿಗಳ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅದೇ ಬದ್ಧತೆ ಪ್ರದರ್ಶಿಸಬೇಕೆಂದು ಅವರು ಒತ್ತಾಯಿಸಿದರು.
Advertisement