News Headlines 06-04-25 | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!

News Headlines 06-04-25 | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!

1. ಭೋವಿ ನಿಗಮ ಹಗರಣ:ಮಾಜಿ ವ್ಯವಸ್ಥಾಪಕನ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪನನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ಪ್ರಕಟಿಸಿದೆ. ಏಪ್ರಿಲ್ 5ರಂದೇ ನಾಗರಾಜಪ್ಪನನ್ನು ಬಂಧಿಸಲಾಗಿದ್ದು, PML ವಿಶೇಷ ನ್ಯಾಯಾಲಯ 14 ದಿನಗಳ ಕಾಲ ಕಸ್ಟಡಿಗೆ ನೀಡಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಭೋವಿ ಸಮುದಾಯದ ಕಲ್ಯಾಣಕ್ಕಾಗಿ KBDCಯಿಂದ 97 ಕೋಟಿ ರೂಪಾಯಿ ದುರುಪಯೋಗ ಮತ್ತು ವರ್ಗಾವಣೆ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ವಿವಿಧ ಆರೋಪಿಗಳ ವಿರುದ್ಧ ಇಡಿ ಏಪ್ರಿಲ್ 4ರಂದು ಮತ್ತು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

2. ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ

ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದು ಅಷ್ಟಕ್ಕೆ ಸುಮ್ಮನಾಗದ ಕಿರಾತಕರು ಬಾಲಕರ ಗುಪ್ತಾಂಗಕ್ಕೆ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ನಲ್ಲೂರಿನ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್​ 4ರಂದೇ ಈ ಘಟನೆ ನಡೆದಿತ್ತು. ಇದರ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನದ ಆರೋಪ ಮಾಡಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿದ್ದ ಯುವಕರು ಅವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಪೊಲೀಸರು 9 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಸುಭಾಷ್​ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

3. ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆಂದು ಕರ್ನಾಟಕ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದೆ. ಏಕರೂಪ ನಾಗರಿಕ ಸಂಹಿತೆ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಏಕತೆಯ ಸಾಂವಿಧಾನಿಕ ಆದರ್ಶಗಳನ್ನು ಸಾಕಾರಗೊಳಿಸುವತ್ತ ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರ ಏಕಪೀಠ ಹೇಳಿದೆ. ಮುಸ್ಲಿಂ ಸಮುದಾಯದ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೂ ಉತ್ತರಾಧಿಕಾರ ಕಾನೂನಿನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡಲಾಗುತ್ತದೆ. ಆದರೆ ಮುಸ್ಲಿಂ ಕಾನೂನಿನಲ್ಲಿ, ಸಹೋದರರಿಗಿಂತ ಸಹೋದರಿಯರಿಗೆ ಕಡಿಮೆ ಪಾಲು ಸಿಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

4. ಹುಬ್ಬಳ್ಳಿಯಲ್ಲಿ ಅಪಘಾತ: ನಾಲ್ವರ ಬಂಧನ

ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್​ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳಾದ ಸುಜಾತಾ ಹಿರೇಮಠ, ಗಾಯತ್ರಿ ಮಾಂತನಮಠ, ಶಕುಂತಲಾ ಹಿರೇಮಠ ಮತ್ತು ಸಂಪತ್​ ಕುಮಾರಿ ಎಂದು ಗುರುತಿಸಲಾಗಿದೆ. ಕಾರು ಚಾಲಕ ವಿರೇಶ್​ ಹಿರೇಮಠ ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ವರೂರು ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

5. ಗ್ರಾಪಂ ಸದಸ್ಯನ ಬರ್ಬರ ಹತ್ಯೆ; ನಾಲ್ವರ ಬಂಧನ

ಬೀದರ್ ಹೊರವಲಯದಲ್ಲಿ ನಡೆದ ಗ್ರಾಪಂ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾವದಗೇರಿಯ ಇಬ್ಬರು ಹಾಗೂ ಹೊನ್ನಿಕೇರಿಯ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಕೊಲೆಗೆ ಸಂಚು ರೂಪಿಸಿದ ಮುಖ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಅಲಿಯಾಬಾದ್-ಚಿಕ್ಕಪೇಟ್ ರಿಂಗ್ರೋಡ್ ಬಳಿಯ ಎಸ್.ಕೆ. ಡಾಬಾದಲ್ಲಿ ಹೊನ್ನಿಕೇರಿ ನಿವಾಸಿ ವೈಜಿನಾಥ ದತ್ತಾತ್ರೇಯ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com