
ಮಡಿಕೇರಿ: ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಡಿಕೇರಿಯ ಹೋಂಸ್ಟೇ ಕೇರ್ ಟೇಕರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿಕೇರಿ ನಗರ ವ್ಯಾಪ್ತಿಯ ಈಶ್ವರ ಹೋಂಸ್ಟೇ ಕೇರ್ ಟೇಕರ್ ಪ್ರವೀಣ್ ಎಂಬಾತ ಮಮತಾ ಮತ್ತು ಅವರ ಪುತ್ರಿಗೆ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.
ಕೊಠಡಿ ಕಾಯ್ದಿರಿಸಿದ ತಾಯಿ- ಮಗಳು ಏಪ್ರಿಲ್ 5 ರಂದು ಹೋಂಸ್ಟೇಗೆ ಚೆಕ್ ಇನ್ ಮಾಡಿದ್ದಾರೆ. ಅವರಿಗೆ ಪ್ರವೀಣ್ ಕೊಠಡಿ ತೋರಿಸಿದ್ದಾರೆ. ಆದರೆ ಏಪ್ರಿಲ್ 6 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಂದಿಗೆ ಬಂದ ಪ್ರವೀಣ್, ಮಮತಾ ಮತ್ತು ಅವರ ಮಗಳು ತಂಗಿದ್ದ ಕೊಠಡಿಯ ಬಾಗಿಲು ಬಡಿದಿದ್ದಾರೆ.
ಇಬ್ಬರು ಆರೋಪಿಗಳು ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ. ಕೊಠಿಡಿಯ ಬಾಗಿಲು ತೆರೆಯುವಂತೆ ಮಮತಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಆಕೆ ಬಾಗಿಲು ತೆರೆಯಲು ನಿರಾಕರಿಸಿದ್ದು, ಹೋಮ್‌ಸ್ಟೇ ಒಳಗೆ ತಾಯಿ-ಮಗಳು ಭಯದಿಂದಲೇ ರಾತ್ರಿ ಕಳೆದಿದ್ದಾರೆ. ಅಲ್ಲಿಂದ ಹೊರಡಲು ಬೇಗನೆ ಎದ್ದಿದ್ದಾರೆ. ಆದರೆ, ಹೋಂಸ್ಟೇನಲ್ಲಿ ನಿಲ್ಲಿಸಿದ್ದ ಅವರ ವಾಹನದ ಎಲ್ಲಾ ಟೈರ್‌ಗಳನ್ನು ಪಂಕ್ಚರ್ ಮಾಡಲಾಗಿದೆ.
ಘಟನೆಯ ನಂತರ ಮಮತಾ ನಗರದ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ಕೇರ್‌ಟೇಕರ್ ಪ್ರವೀಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವೇಳೆ ಮಮತಾ ಮಾಲೀಕರಿಂದ ಯಾವುದೇ ಸಹಾಯವನ್ನು ಪಡೆಯದ ಕಾರಣ, ಹೋಂಸ್ಟೇ ಮಾಲೀಕ ಕಾವೇರಪ್ಪನನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಬೆಳ್ಳಂಬೆಳಗ್ಗೆ ಹೋಂಸ್ಟೇಗೆ ತೆರಳಿದ್ದ ಪ್ರವೀಣ್ ಜೊತೆಯಲ್ಲಿದ್ದ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ಪ್ರಕರಣದ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ.
ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಎರಡನೇ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Advertisement