
ಬೆಂಗಳೂರು: ಕಾವೇರಿ ನೀರು ಸಂಪರ್ಕಕ್ಕೆ ದೊಡ್ಡ ಮೊತ್ತದ ಠೇವಣಿ ದರ ಭರಿಸಲು ಅಪಾರ್ಟ್‌ಮೆಂಟ್ ಫೆಡರೇಶನ್‌ಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಜಲಮಂಡಳಿ ಹೊಸ ಪರಿಹಾರ ಸೂತ್ರ ರೂಪಿಸಿದ್ದು, ಇಎಂಐ ಮೂಲಕ ಠೇವಣಿ ಮೊತ್ತ ಪಾವತಿಸಲು ಅವಕಾಶ ಕಲ್ಪಿಸಲು ಚಿಂತನೆ ನಡೆಸಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ, ಬೆಂಗಳೂರು ನಗರದ ಎಲ್ಲಾ ನಾಗರಿಕರಿಗೆ ಶುದ್ಧ ಮತ್ತು ಬಿಐಎಸ್-ಪ್ರಮಾಣೀಕೃತ ಕುಡಿಯುವ ನೀರನ್ನು ಒದಗಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಮುಖ್ಯಸ್ಥ ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ.
ಏಪ್ರಿಲ್ 15ರ ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯಂತೆ ಅಪಾರ್ಟ್‌ಮೆಂಟ್/ಮನೆ ಮಾಲೀಕರು 12 ತಿಂಗಳವರೆಗೆ ಸಮಾನ ಕಂತುಗಳಲ್ಲಿ ಶುಲ್ಕವನ್ನು ಪಾವತಿಸುವ ಮೂಲಕ ಕಾವೇರಿ ನೀರಿನ ಸಂಪರ್ಕವನ್ನು ಪಡೆಯಬಹುದು.
ಡಿಮ್ಯಾಂಡ್ ನೋಟಿಸ್ (ಅನ್ವಯಿಸಿದಲ್ಲಿ ಪ್ರೋರೇಟಾ ಶುಲ್ಕ ಮೀಟರ್ ಶುಲ್ಕ ಪರಿವೀಕ್ಷಣಾ ಶುಲ್ಕ ಜಿಬಿ ವಾಸ್ಟ್ ಬಿಸಿಸಿ ಶುಲ್ಕಗಳು ಹಾಗೂ ಲೈನ್ ವೆಚ್ಚ ಸೇರಿದ) ತಲುಪಿದ ನಂತರ ಒಟ್ಟು ಶುಲ್ಕದಲ್ಲಿ ಶೇ 20ರಷ್ಟು ಮೊತ್ತವನ್ನು ಮೊದಲ ಕಂತಾಗಿ ಪಾವತಿಸಬೇಕು. ಉಳಿದ ಶೇ 80ರಷ್ಟು ಶುಲ್ಕವನ್ನು 12 ತಿಂಗಳ ಸಮಾನ ಕಂತುಗಳಲ್ಲಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.
Advertisement