
ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರಿಗೆ ಬೆದರಿಕೆ ಹಾಕಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ, ಮೃತ ವಿನಯ್ ಸೋಮಯ್ಯ ಅವರ ಸಹೋದರ ಕಾಂಗ್ರೆಸ್ ನಾಯಕರ ವಿರುದ್ಧ ಕೊಡಗು ಎಸ್ಪಿ ಮತ್ತು ಡಿಸಿಗೆ ದೂರು ನೀಡಿದರು.
ಈ ವೇಳೆ ಎಸ್ಪಿ ಕೆ ರಾಮರಾಜನ್ ಮತ್ತು ಡಿಸಿ ವೆಂಕಟ್ ರಾಜ ಅವರನ್ನು ಭೇಟಿ ಮಾಡಿ ವಿನಯ್‌ಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಒತ್ತಡದಿಂದ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದು ನಾಲ್ಕು ದಿನಗಳು ಕಳೆದಿವೆ. ಆದರೆ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸ್ ಇಲಾಖೆಯ ಯಾರೋ ಒಬ್ಬರು ವಿನಯ್‌ಗೆ ಪದೇ ಪದೇ ಕರೆ ಮಾಡಿ ಸೆಕ್ಷನ್ 107 ವಿಧಿಸಲಾಗುವುದು ಮತ್ತು ತಹಶೀಲ್ದಾರ್ ಕಚೇರಿಗೆ ಬರಬೇಕೆಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.
ಮಾರ್ಚ್ 21 ರಂದು, ಬೆಳಿಗ್ಗೆ 10.09 ಕ್ಕೆ ವಿನಯ್'ಗೆ ಕರೆ ಮಾಡಿರುವ ಪೊಲೀಸ್ ಅಧಿಕಾರಿ ಎರಡು ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ವಿನಯ್‌ಗೆ ಯಾರು ಕರೆ ಮಾಡಿದರು ಮತ್ತು ಅವರು ಸೆಕ್ಷನ್ 107 ವಿಧಿಸುವುದಾಗಿ ಏಕೆ ಬೆದರಿಕೆ ಹಾಕಿದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಬೇಕು.
ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಮತ್ತು ಶಾಂತಿ ಕದಡುವ ಕೃತ್ಯಗಳನ್ನು ಎಸಗಿದವರ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 107 ಅನ್ನು ದಾಖಲಿಸಲಾಗುತ್ತದೆ. ವಿನಯ್ ಕೇವಲ ವಾಟ್ಸಾಪ್ ಗುಂಪಿನ ಅಡ್ಮಿನ್ ಆಗಿದ್ದರು. ಈ ಬಗ್ಗೆ ನಾವು ಕೊಡಗು ಎಸ್‌ಪಿಯನ್ನೂ ಪ್ರಶ್ನಿಸಿದ್ದೇವೆ. ತೆನ್ನಿರ ಮೈನಾ ಮೂಲಕ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರೇ ವಿನಯ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಎಫ್‌ಐಆರ್‌ನಲ್ಲಿ ಶಾಸಕ ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರ ಹೆಸರನ್ನು ಉಲ್ಲೇಖಿಸಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಿನಯ್ ಸೋಮಯ್ಯ ಅವರಿಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು
Advertisement