ಮುಡಾ ಹಗರಣದ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಗಣಿ ಗುತ್ತಿಗೆ ನವೀಕರಣ ವಿಷಯದಲ್ಲಿ ಸಿಎಂ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು ಸಿಎಂ ಕಿಕ್ ಬ್ಯಾಕ್ ಪಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿದ್ದರಾಮಯ್ಯ 8 ಗಣಿ ಗುತ್ತಿಗೆ ನವೀಕರಣ ಮಾಡಿದ್ದರು. ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್ ಕೂಡ ನವೀಕರಣ ಮಾಡಲಾಗಿತ್ತು. ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಕ್ಕೆ ಸಿದ್ದರಾಮಯ್ಯ ಸುಮಾರು 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ರಾಮಮೂರ್ತಿ ಗೌಡ ಆರೋಪಿಸಿದ್ದಾರೆ.
ಗ್ಯಾಸ್ ಕಟ್ಟರ್ ಬಳಸಿ ಭದ್ರತೆ ಇಲ್ಲದ SBI ATM ಅನ್ನು ಮುರಿದ ಖದೀಮರು 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ರಾಮನಗರ ಬಳಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಟಿಎಂ ಕಿಯೋಸ್ಕ್‌ಗೆ ಪ್ರವೇಶಿಸಿದ ದುಷ್ಕರ್ಮಿಗಳು ತಮ್ಮ ಗುರುತು ಸಿಗದಂತೆ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಕಪ್ಪು ಬಣ್ಣ ಎರಚಿದ್ದಾರೆ. ನಂತರ ಎರಡು ಎಟಿಎಂಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿದು ಹಣದೊಂದಿಗೆ ಪರಾರಿಯಾಗಿದ್ದಾರೆ. ದರೋಡೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಎಟಿಎಂನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಭದ್ರತೆ ಇಲ್ಲದ ಕಾರಣ ದುಷ್ಕರ್ಮಿಗಳು ಸುಲಭವಾಗಿ ಎಟಿಎಂ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ವ್ಯಾಪಕವಾಗಿರುವುದರಿಂದಲೇ ಗುಣಮಟ್ಟದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಿಂದೆಲ್ಲ ಐದಾರು ದಶಕ ಬಾಳಿಕೆ ಬರುತ್ತಿದ್ದ ಸರ್ಕಾರಿ ಕಟ್ಟಡಗಳು ಇಂದು ಹತ್ತು ವರ್ಷಗಳಲ್ಲಿಯೇ ಬಿದ್ದು ಹೋಗುತ್ತಿವೆ. ಇದಕ್ಕೆಲ್ಲಾ ಭ್ರಷ್ಟಾಚಾರವೇ ಕಾರಣ ಎಂದು ಹೇಳಿದ್ದರು. ಇನ್ನು ರಾಯರೆಡ್ಡಿ ಭ್ರಷ್ಟಾಚಾರ ಹೇಳಿಕೆಯನ್ನೇ ಗುರಿಯಾಗಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಭ್ರಷ್ಟಾಚಾರ, ಲೂಟಿಕೋರತನ ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಿಭಾಜ್ಯ ಅಂಗ ಎಂಬುದುನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೆ ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯಗೆ ತಿವಿದಿದ್ದಾರೆ.
ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಈ ನಡುವೆ BWSSB ನಿರೀಕ್ಷೆಯಂತೆಯೇ ನೀರಿನ ದರ ಹೆಚ್ಚಳ ಮಾಡುವುದನ್ನು ಸ್ಪಷ್ಟಪಡಿಸಿದೆ. ದರ ಹೆಚ್ಚಳ ಬಗ್ಗೆ ಮಾತನಾಡಿರುವ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಗೃಹ ಬಳಕೆ ಕನೆಕ್ಷನ್ಗೆ ಲೀಟರ್ ಗೆ ಗರಿಷ್ಠ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಬೆಲೆ ಏರಿಕೆಯ ಪರಿಣಾಮವಾಗಿ ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಸುತ್ತಾರೋ ಎಷ್ಟು ದರ ಏರಿಕೆಯಾಲಿದೆ ಎಂದು ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ 42ನೇ ACJM ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಪ್ರಕರಣದಲ್ಲಿ ಬಿ.ನಾಗೇಂದ್ರ ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು 1 ಕೋಟಿ 25 ಲಕ್ಷ ರೂ.ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟದಿದ್ದರೆ 1 ವರ್ಷ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದೆ. ನಾಗೇಂದ್ರನ ವಿರುದ್ಧ VSL ಸ್ಟೀಲ್ ಲಿಮಿಟೆಡ್ ಕಂಪನಿ ಚೆಕ್ಸ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಮತ್ತೊಂದೆಡೆ ವಾಲ್ಮೀಕಿ ನಿಗಮ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಇಂದು ಅನುಮತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಇಡಿ ಮನವಿ ಮಾಡಿತ್ತು.
Advertisement