
ಬೆಂಗಳೂರು: 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಮುದಾಯದ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಿನ್ನೆಯಷ್ಟೇ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಂಚಮಸಾಲಿ ಸಮುದಾಯದ ಪ್ರಮುಖ ಬಿಜೆಪಿ ನಾಯರು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕಿಡಿಕಾರಿದ್ದು, ರಾಜಕೀಯದಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯ ಪಂಚಮಸಾಲಿ ಸಮುದಾಯದ ನಾಯಕ ಮತ್ತು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಅವರು ಮಾತನಾಡಿ, ಸ್ವಾಮೀಜಿಗಳು ಬಿಜೆಪಿಯ ಆಂತರಿಕ ವಿಚಾರದಲ್ಲಿ ಮೂಗು ತೂರಿಸದೆ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಸ್ವಾಮೀಜಿ ಮಾಡಬೇಕು. ಬಿಜೆಪಿ ಯತ್ನಾಳ್ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಆ ಪಕ್ಷದ ಸಂಪೂರ್ಣ ಆಂತರಿಕ ವಿಷಯ. ಆದರೆ ಯತ್ನಾಳ್ ಅವರನ್ನು ನೇರವಾಗಿ ಬೆಂಬಲಿಸುವ ಮೂಲಕ ಮತ್ತು ಅವರನ್ನು ದೊಡ್ಡ ಪಂಚಮಸಾಲಿ ನಾಯಕ ಎಂದು ಬಿಂಬಿಸುವ ಮೂಲಕ ಸ್ವಾಮೀಜಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ಮೂಲಕ ಸಮುದಾಯದ ಮಾನ ಹಾಳು ಮಾಡುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಇತರೆ ಪಂಚಮಸಾಲಿ ನಾಯಕರು ಬಿಜೆಪಿಯ ನಿರ್ಧಾರವನ್ನು ಸ್ವಾಗತಿಸಿದ್ದರೆ, ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಾತ್ರ ಯತ್ನಾಳ್ ಅವರಿಗೆ ಬೆಂಬಲಿಸುತ್ತಿರುವುದನ್ನು ನೋಡುತ್ತಿದ್ದರೆ ಆಶ್ಚರ್ಯವಾಗುತ್ತಿದೆ ಎಂದು ತಿಳಿಸಿದರು.
ಸ್ವಾಮೀಜಿಗಳು ಯತ್ನಾಳ್ ಅವರನ್ನು ಉಚ್ಚಾಟಿಸುವುದರ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಮೂಲಗ ತಮ್ಮದೇ ಸಮುದಾಯದ ನಾಯಕರ ಭಾವನೆಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಪಕ್ಷವು ಯತ್ನಾಳ್ ಅವರಿಗೆ ತಪ್ಪುಗಳ ಸರಿಮಾಡಿಕೊಳ್ಳಲು ಹಲವು ಅವಕಾಶಗಳನ್ನು ನೀಡಿತ್ತು. ಇನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು. ಆದರೆ, ತಪ್ಪು ತಿದ್ದಿಕೊಳ್ಳದ ಹಿನ್ನೆಲೆಯಲ್ಲಿ ಉಚ್ಛಾಟನೆ ಮಾಡಿದೆ. ಇದು ಬಿಜೆಪಿಯ ಆಂತರಿಕ ವಿಚಾರ. ಈ ನಿರ್ಧಾರಕ್ಕೂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಯತ್ನಾಳ್ ಎಲ್ಲರನ್ನೂ ಟೀಕಿಸಿದ್ದಾರೆ. ಅವರ ಅನಿಯಂತ್ರಿತ ನಡವಳಿಕೆಗಳಿಂದಲೇ ಯತ್ನಾಳ್ ಈ ಹಂತ ತಲುಪಿದ್ದಾರೆ. ಮೈಕ್ ಸಿಗುತ್ತಿದ್ದಂತೆಯೇ ಆಕ್ರೋಶ ಭರಿತ ಭಾಷಣ ಮಾಡುತ್ತಾರೆ. ಯೊರೊಬ್ಬರನ್ನೂ ಬಿಡುವುದಿಲ್ಲ. ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾರೆ. ಅವರ ಕೆಲವು ಬೆಂಬಲಿಗರು ಹುರಿದುಂಬಿಸುತ್ತಾರೆಂಬ ಕಾರಣಕ್ಕೆ ತಾವು ಹೇಳುವುದೆಲ್ಲವೂ ಸರಿ ಎಂದು ಭಾವಿಸುತ್ತಾರೆಂದು ಕಿಡಿಕಾರಿದರು.
ಮತ್ತೊಬ್ಬ ಬಿಜೆಪಿ ನಾಯಕ ಸಂಜಯ್ ಪಾಟೀಲ್ ಕನಮಾಡಿ ಅವರು ಮಾತನಾಡಿ, ಸ್ವಾಮೀಜಿಗಳು ಯತ್ನಾಳ್ ಅವರಿಗೆ ನೀಡಿದ ಬೆಂಬಲವನ್ನು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆರಂಭದಲ್ಲಿ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದ ಸ್ವಾಮೀಜಿ ಈಗ ನಿಧಾನಗತಿಯಲ್ಲಿ ಅದರಿಂದ ದೂರ ಸರಿದು ರಾಜಕೀಯಕ್ಕೆ ಬರುತ್ತಿದ್ದಾರೆಂದು ಕಿಡಿಕಾರಿದರು.
ವಿಜುಗೌಡ ಪಾಟೀಲ್ ಅವರು ಮಾತನಾಡಿ. ತಮ್ಮ ದೌರ್ಬಲ್ಯದ ಬಗ್ಗೆ ಯತ್ನಾಳ್ ಅವರಿಗೆ ತಿಳಿದಿದೆ ಎಂಬ ಕಾರಣಕ್ಕೆ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಯೇ? ಹಾಗಿಲ್ಲದಿದ್ದರೆ ಪಂಚಮಸಾಲಿ ನಾಯಕರ ಭಾವನೆಗಳಿಗೆ ವಿರುದ್ಧವಾಗಿ ಯತ್ನಾಳ್ ಅವರನ್ನು ಬೆಂಬಲಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಈ ಹೇಳಿಕೆಯನ್ನು ನಾನು ನೀಡುತ್ತಿಲ್ಲ. ಜನರು ಹೇಳುತ್ತಿರುವುದನ್ನೇ ನಾನು ಹೇಳುತ್ತಿದ್ದಾರೆಂದು ತಿಳಿಸಿದರು. ಇದೇ ವೇಳೆ ಪೀಠದಿಂದ ಸ್ವಾಮೀಜಿಗಳನ್ನು ಹೊರಹಾಕಲು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ನಿರ್ಧಾರವನ್ನು ಪೀಠದ ಸಮುದಾಯದ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿದರು.
Advertisement