News headlines 11-04-2025 | ಗುತ್ತಿಗೆದಾರರಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ಹೋಗಲಿ- DK Shivakumar; ಜಾತಿಗಣತಿ ವರದಿ ಜಾರಿ- ಏಪ್ರಿಲ್ 17 ಕ್ಕೆ ಅಂತಿಮ ನಿರ್ಧಾರ; ನಗರದಲ್ಲಿ ನೈತಿಕ ಪೊಲೀಸ್ ಗಿರಿ, ನಾಲ್ವರ ಬಂಧನ

News headlines 11-04-2025 | ಗುತ್ತಿಗೆದಾರರಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ಹೋಗಲಿ- DK Shivakumar; ಜಾತಿಗಣತಿ ವರದಿ ಜಾರಿ- ಏಪ್ರಿಲ್ 17 ಕ್ಕೆ ಅಂತಿಮ ನಿರ್ಧಾರ; ನಗರದಲ್ಲಿ ನೈತಿಕ ಪೊಲೀಸ್ ಗಿರಿ, ನಾಲ್ವರ ಬಂಧನ

1. ಜಾತಿ ಗಣತಿ ವರದಿ ಅನುಷ್ಠಾನ: ಏ.17 ಕ್ಕೆ ಅಂತಿಮ ತೀರ್ಮಾನ- ಸಿದ್ದರಾಮಯ್ಯ

ತೀವ್ರ ವಿವಾದಕ್ಕೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ವರದಿ ಅನುಷ್ಠಾನದ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಜಾತಿ ಗಣತಿ ವರದಿ ಜಾರಿಗೊಳಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಲಕೋಟೆ ತೆರೆದು ಸಚಿವರ ಕೈಗೆ ನೀಡಿದರು. ಬಳಿಕ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, "ಕೆಲವು ಸಚಿವರು ಮೊದಲು ಶಿಫಾರಸುಗಳನ್ನು ಪರಿಶೀಲಿಸಬೇಕೆಂದು ಹೇಳಿದರು. ಈ ಕಾರಣಕ್ಕಾಗಿ, ಏಪ್ರಿಲ್ 17 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

2. ಶೇ.40ರಷ್ಟು ಕಮಿಷನ್ ಆರೋಪ: ಬಿಜೆಪಿ ಸರ್ಕಾರದ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ-HKP, ಕಮಿಷನ್ ಕೇಳಿದ್ದರೆ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಲಿ-DKS

ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ತನಿಖಾ ವರದಿಯ ಹಿನ್ನೆಲೆಯಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಶೇ. 40 ರಷ್ಟು ಆಯೋಗದ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಕರ್ನಾಟಕ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ. ಎಸ್‌ಐಟಿ ಎರಡು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಚಿವರ ಪ್ರಕಾರ, ಮೂರು ಲಕ್ಷ ಕಾಮಗಾರಿಗಳಲ್ಲಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯು 1,729 ಕಾಮಗಾರಿಗಳ ಮಾದರಿಯನ್ನು ತೆಗೆದುಕೊಂಡು ವಿಚಾರಣೆ ನಡೆಸಿದೆ. ಈಮಧ್ಯೆ, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಇದರಲ್ಲಿ ಭಾಗಿಯಾಗಿಲ್ಲ" ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. "ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಅವರಿಗೆ ಇಲಾಖೆಯ ಬಜೆಟ್ ಅರಿವಿಲ್ಲವೇ? ಅನುದಾನವೇ ಇಲ್ಲದಿರುವಾಗ ಅವರು ಗುತ್ತಿಗೆ ಹೇಗೆ ತೆಗೆದುಕೊಂಡರು?" ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.

3. ಚಂದ್ರಾ ಲೇಔಟ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ನಾಲ್ವರ ಬಂಧನ

ನಗರದ ಚಂದ್ರಾ ಲೇಔಟ್‌ನಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ಪ್ರಕಾರ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಯುವಕನೊಂದಿಗೆ ಸ್ಕೂಟರ್‌ನಲ್ಲಿ ಕುಳಿತಿದ್ದಾಗ, ಅಲ್ಲಿಗೆ ಬಂದ ನಾಲ್ವರು ಬೇರೆ ಸಮುದಾಯದ ವ್ಯಕ್ತಿಯೊಂದಿಗೆ ಮಾತನಾಡಿದ ಕಾರಣಕ್ಕಾಗಿ ಅವರಿಗೆ ತೊಂದರೆ ನೀಡಿದ್ದಾರೆ. 'ಈ ಸಂಬಂಧ ಮಹಿಳೆ ನಮಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಒಬ್ಬ ಬಾಲಾಪರಾಧಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಅವರು ಹೇಳಿದರು.

4. ರಸ್ತೆ ಅಪಘಾತ: ಯಾದಗಿರಿಯಲ್ಲಿ ನಾಲ್ವರು ಸಾವು,

ಬುಲೆರೊ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವರ್ಕನಹಳ್ಳಿ ಗ್ರಾಮದವರಾದ ಬುಲೆರೊ ಚಾಲಕ ಶರಣಪ್ಪ, ಸುನೀತಾ, ಸೋಮವ್ವ, ತಂಗಮ್ಮ ಮೃತಪಟ್ಟಿದ್ದಾರೆ. ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಜವಳ ಕಾರ್ಯಕ್ಕೆ ಕುಟುಂಬಸ್ಥರು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

5. ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌ ಗೆ ನಿರ್ಬಂಧ- ಪುತ್ತಿಗೆಮಠ

ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್‌, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್‌ ನಿಷೇಧಿಸಿ ಶ್ರೀಕೃಷ್ಣ ಮಠದ ಆಡಳಿತ ನಿರ್ಧಾರ ಕೈಗೊಂಡಿದೆ. ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಪುರಾತನ ದೇವಸ್ಥಾನ, ಕನಕಗೋಪುರ, ಅಷ್ಟಮಠಗಳ ಎದುರು, ರಥಬೀದಿಯಲ್ಲಿ ಬೆಳಗ್ಗಿನಿಂದ ಮದುವೆಯಾಗಲಿರುವ ಜೋಡಿ ಶೂಟ್‌ ನಿರತವಾಗುತ್ತಿತ್ತು, ಸರಸ ಸಲ್ಲಾಪದಲ್ಲಿ ತೊಡಗುತ್ತಿತ್ತು. ಭಕ್ತರಿಂದ ಬಂದ ದೂರುಗಳ ಆಧಾರದ ಮೇಲೆ, ಅನುಚಿತ ಮತ್ತು ಮುಜುಗರದ ವೀಡಿಯೊಗಳ ಚಿತ್ರೀಕರಣವನ್ನು ಅನುಮತಿಸದಿರಲು ಪುತ್ತಿಗೆ ಮಠ ನಿರ್ಧರಿಸಿದೆ. ರಥ ಬೀದಿ ಭಕ್ತಿ ಮತ್ತು ಗೌರವದ ಸ್ಥಳವಾಗಿದೆ. ಅಂತಹ ಪವಿತ್ರ ಸ್ಥಳದಲ್ಲಿ, ವೈಯಕ್ತಿಕ ಲಾಭಕ್ಕಾಗಿ, ವಿಶೇಷವಾಗಿ ಅಗೌರವವನ್ನುಂಟುಮಾಡುವ ವೈಯಕ್ತಿಕ ಕಲ್ಪನೆಗಳ ಆಧಾರದ ಮೇಲೆ ವೀಡಿಯೊಗಳನ್ನು ಚಿತ್ರೀಕರಿಸುವುದು ಸೂಕ್ತವಲ್ಲ ಎಂದು ಮಠದ ಪ್ರತಿನಿಧಿ ಗೋಪಾಲ್ ಆಚಾರ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com