
ಬೆಂಗಳೂರು: ಸೌಜನ್ಯ ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ಕುರಿತು ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಆಘಾತ ಎದುರಾಗಿದ್ದು, ಆತನ ವಿರುದ್ಧ 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದೆ.
ಹೌದು.. ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಕೋರ್ಟ್ ಆದೇಶ ಉಲ್ಲಂಘಿಸಿ ಎರಡನೆ ವಿಡಿಯೊ ಬಿಟ್ಟಿರುವ ಆರೋಪ ಹಿನ್ನೆಲೆ ʼದೂತʼ ಹೆಸರಿನ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಮೂಲಗಳ ಪ್ರಕಾರ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಈ ಹಿಂದೆ ಮಾಡಿರುವ ವಿಡಿಯೊ ತೆಗೆದುಹಾಕುವಂತೆ ಮತ್ತು ಈ ಕುರಿತು ವಿಡಿಯೊ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಅದೇಶವನ್ನು ಉಲ್ಲಂಘಿಸಿ, ಎರಡನೆ ವಿಡಿಯೋ ಬಿಟ್ಟಿರುವ ಹಿನ್ನೆಲೆ ಸಮೀರ್ ಎಂಡಿ ಮೇಲೆ ಮಾನಷ್ಟ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಮಧ್ಯಾಂತರ ಆದೇಶ ಉಲ್ಲಂಘಿಸಿ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಅದರ ಮುಖ್ಯಸ್ಥರು ಹಾಗೂ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ವೀಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಯುಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
10 ಕೋಟಿ ರೂ. ಪರಿಹಾರ ಕೋರಿ ಈ ಮಾನನಷ್ಟ ದಾವೆ ದಾಖಲಿಸಲಾಗಿದೆ. ಈ ಸಂಬಂಧ ಡಿ. ನಿಶ್ಚಲ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಅವರು ಮೂಲ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ನಟರಾಜ್ ಅವರು, ಯೂಟ್ಯೂಬರ್ ಎಂ.ಡಿ. ಸಮೀರ್- ದೂತ ಯೂಟ್ಯೂಬ್ ಚಾನೆಲ್‌ಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ ವಿವಾದಿತ ವಿಡಿಯೊವನ್ನು ಯುಟ್ಯೂಬ್ ಚಾನಲ್‌ನಿಂದ ತತ್‌ಕ್ಷಣ ತೆಗೆದುಹಾಕುವಂತೆ ಸಮೀರ್‌ಗೆ ಸೂಚನೆ ನೀಡಿ ಅರ್ಜಿಯ ವಿಚಾರಣೆಯನ್ನು ಜೂನ್9ಕ್ಕೆ ಮುಂದೂಡಿದ್ದಾರೆ.
ಧರ್ಮಸ್ಥಳ ಪರ ರಾಜಶೇಖರ ಹಿಲ್ಯಾರ್ ಮಂಡಿಸಿದ ವಾದವನ್ನು ಆಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಈ ಆದೇಶ ಮಾಡಿದ್ದಾರೆ.
Advertisement