
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ಭಾರಿ ಮಳೆಯಾಗಿದೆ. ಹಾವೇರಿ, ಚಿತ್ರದುರ್ಗ ಸೇರಿದಂತೆ ಕೆಲವು ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮುಂಗಾರು ಪೂರ್ವ ಮಳೆಯಾಗಿದೆ.
ಬೆಂಗಳೂರಿನಲ್ಲಿ ವಿವಿಧೆಡೆ ಜೋರು ಮಳೆಯಾಗುತ್ತಿದೆ. ರಾತ್ರಿ 10 ಗಂಟೆ ಸುಮಾರಿಗೆ ಆರಂಭವಾದ ಮಳೆ, ವಿಧಾನಸೌಧ, ಶಿವಾಜಿನಗರ, ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಹಲಸೂರು ಸೇರಿದಂತೆ ವಿವಿಧಡೆ ಅಬ್ಬರಿಸಿತು.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹರಸಾಹಸಪಡುವಂತಾಯಿತು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಗದಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ಕೆಲವೆಡೆ ಬಾಳೆ ಮತ್ತಿತರ ಬೆಳೆ ನೆಲಕ್ಕುರುಳಿದಿರುವ ಬಗ್ಗೆ ವರದಿಯಾಗಿದೆ. ಮುಂದಿನ ಎರಡು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement