ವಿವಿಧ ಕೌಶಲ ಸಹಿತ ಮತ್ತು ಕೌಶಲ ರಹಿತ ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಇಲಾಖೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಅಧಿಸೂಚನೆ ಪ್ರಕಾರ, ಶೌಚಾಲಯ, ಸ್ನಾನಗೃಹಗಳು, ಒಳ ಚರಂಡಿಗಳನ್ನು ಶುಚಿ ಮಾಡುವ ಕೆಲಸಗಾರರಿಗೆ ತಿಂಗಳಿಗೆ ರೂ. 21,251 ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಅತಿ ಕುಶಲ ಎಲೆಕ್ಟ್ರಿಷಿಯನ್‌ಗಳಿಗೆ ರೂ. 34,225 ಆಗಿದೆ. ನುರಿತ ಎಲೆಕ್ಟ್ರಿಷಿಯನ್‌ಗಳಿಗೆ ತಿಂಗಳಿಗೆ 31,114 ರೂಪಾಯಿ, ಅರೆ ಕುಶಲ ಕಾರ್ಮಿಕರಿಗೆ ತಿಂಗಳಿಗೆ 28,285 ರೂ ನಿಗದಿಪಡಿಸಲಾಗಿದೆ.
BBMP ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮತ್ತು ರಸ್ತೆ ಬದಿ ಪಾರ್ಕಿಂಗ್ ವೆಚ್ಚ ಸಂಗ್ರಹಿಸಲು ನಿರ್ಧರಿಸಿರುವ ಸರ್ಕಾರದ ನಡೆ ವಿರುದ್ಧ ನಾಗರಿಕರು ಸಹಿ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರು ನವನಿರ್ಮಾಣ ಪಕ್ಷ (BNP) ಈ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದು, ಈಗಾಗಲೇ ಸುಮಾರು 1400 ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಿ ಹಾಕಿದ್ದಾರೆ. ಬೆಂಗಳೂರಿನ ವಿವಿಧ ಪ್ರದೇಶಗಳ 1,000 ಕ್ಕೂ ಹೆಚ್ಚು ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪರಿಚಯಿಸಿದ ಘನತ್ಯಾಜ್ಯ ನಿರ್ವಹಣಾ ಬಳಕೆದಾರ ಶುಲ್ಕ ಮತ್ತು ಖಾಸಗಿ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕದಂತಹ ಹೆಚ್ಚುವರಿ ತೆರಿಗೆಗಳನ್ನು ಪಾವತಿಸುವುದಿಲ್ಲ ಎಂದು ಆನ್‌ಲೈನ್‌ನಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ಬಿಎನ್ ಪಿ ಪಕ್ಷ ಹೆಚ್ಚುವರಿ ತೆರಿಗೆಯ ವಿಷಯಕ್ಕೆ ಸಂಬಂಧಿಸಿದಂತೆ BNP 'ನಾನು ಹೊಸ ಶುಲ್ಕಗಳನ್ನು ಪಾವತಿಸುವುದಿಲ್ಲ' ಎಂಬ ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸಿದ್ದು, ಈಗಾಗಲೇ ವಿವಾದಿತ ನಡೆ ವಿರುದ್ಧ ಬಿಬಿಎಂಪಿ ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ರವಾನಿಸಲಾಗಿದೆ ಎಂದು BNP ಸದಸ್ಯರು ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ವೇತನ ಪಾವತಿ ವಿಳಂಬವಾದ ಕಾರಣ ಕೆರೆಗಳನ್ನು ಕಾಯುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳು ರಾಜೀನಾಮೆ ನೀಡಿದ್ದಾರೆ. ಪರಿಣಾಮ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಭದ್ರತೆ ಕಳವಳಕಾರಿಯಾಗಿದ್ದು, ಇದು ನಿವಾಸಿಗಳು ಮತ್ತು ಕಾರ್ಯಕರ್ತರು ಕೆರೆಗಳ ಸುರಕ್ಷತೆಯ ಬಗ್ಗೆ ಚಿಂತೆಗೀಡುವಂತೆ ಮಾಡಿದೆ. ಸುಮಾರು 50 ಮಾರ್ಷಲ್‌ಗಳು ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು 24x7 ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಎರಡೂ ಕೆರೆಗಳಲ್ಲಿ ಕೇವಲ ಎರಡು ಅಥವಾ ಮೂರು ಮಾರ್ಷಲ್‌ಗಳು ಮಾತ್ರ ಕಂಡುಬರುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿಯೂ ಸಹ, ಬಿಬಿಎಂಪಿ ನಮ್ಮ ಸಂಬಳ ಬಿಡುಗಡೆ ಮಾಡುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಾರ್ಷಲ್ ಒಬ್ಬರು ಹೇಳಿದ್ದಾರೆ.
ಇತಿಹಾಸ ಪ್ರಸಿದ್ದ ಶ್ರೀ ಧರ್ಮರಾಯಸ್ವಾಮಿ ಬೆಂಗಳೂರು ಕರಗದ ಉತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಕರಗದ ಉತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಠಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಕಾರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಂಗಳೂರು ಕರಗೋತ್ಸವ ಇರುವುದರಿಂದ ಇಂದು ಮತ್ತು ನಾಳೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಏಪ್ರಿಲ್ 12ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13ರ ಸಂಜೆ 6 ಗಂಟೆಯವರೆಗೆ ಅವೆನ್ಯೂ ರಸ್ತೆ, ಕೆಆರ್ ಮಾರ್ಕೆಟ್ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್‌ಪೇಟ್, ಕೆ.ಜಿ.ರಸ್ತೆ, ಚಿಕ್ಕಪೇಟೆ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಮಂಗಳೂರು–ಉಡುಪಿ ನಡುವೆ ಮೆಟ್ರೊ ರೈಲು ಯೋಜನೆ ಆರಂಭಿಸುವ ಕುರಿತು ಕಾರ್ಯಸಾಧ್ಯತೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಮಂಗಳೂರು–ಉಡುಪಿ ನಡುವೆ ಮೆಟ್ರೊ ರೈಲು ಯೋಜನೆಯು ಕರಾವಳಿಯ ಆರ್ಥಿಕತೆ ಬೆಳವಣಿಗೆ, ಜನರ ಜೀವನ ಮಟ್ಟದ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಮಂಗಳೂರು ಮತ್ತು ಉಡುಪಿ ನಗರಗಳ ನಡುವೆ ಮೆಟ್ರೊ ರೈಲು ಯೋಜನೆ ಬಗ್ಗೆ ಕಾರ್ಯಸಾಧ್ಯತಾ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
Advertisement