
ಬೆಂಗಳೂರು: ಸರ್ಕಾರದ ಓಲೈಕೆ ರಾಜಕಾರಣದಿಂದಾಗಿ ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಮುರ್ಷಿದಾಬಾದ್ ಜಿಲ್ಲೆಯಿಂದ ಹಿಂದೂಗಳು ಪಲಾಯನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಪಿಸಿ ಮೋಹನ್, ಕರ್ನಾಟಕ ಕಾಂಗ್ರೆಸ್‌ನ ತುಷ್ಟೀಕರಣ ತಂತ್ರಗಳಿಂದ ಇಲ್ಲಿಯೂ ಇದೇ ರೀತಿಯ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಸರ್ಕಾರದ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು 'ತುಷ್ಟೀಕರಣ ತಂತ್ರ' ಎಂದು ಕರೆದ ಬೆಂಗಳೂರು ಕೇಂದ್ರ ಸಂಸದರು, ಹಿಂದೂಗಳು 'ಎಚ್ಚರಗೊಳ್ಳುವಂತೆ' ಕರೆ ನೀಡಿದ್ದಾರೆ.
'ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿರುವ ಘಟನೆಗಳು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಅಪಾಯಕಾರಿ ಓಲೈಕೆ ರಾಜಕಾರಣದ ನೇರ ಪರಿಣಾಮವಾಗಿದೆ. ಇದು ಹಿಂದೂಗಳನ್ನು ಪಲಾಯನ ಮಾಡುವಂತೆ ಮಾಡಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇ 4ರಷ್ಟು ಮೀಸಲಾತಿಯಂತಹ ಕರ್ನಾಟಕ ಕಾಂಗ್ರೆಸ್‌ನ ಓಲೈಕೆಯ ತಂತ್ರಗಳು ಸಹ ಇದೇ ರೀತಿಯ ಪರಿಸ್ಥಿತಿಗೆ ಕಾರಣವಾಗಬಹುದು. ಹಿಂದೂಗಳೇ, ಎದ್ದೇಳಿ!' ಎಂದು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜನರು ತಮ್ಮ ಕುಟುಂಬಗಳು ಮತ್ತು ವಸ್ತುಗಳೊಂದಿಗೆ ಮುರ್ಷಿದಾಬಾದ್‌ನಿಂದ ಪಲಾಯನ ಮಾಡುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಮೋಹನ್ ಹಂಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.
Advertisement