
ಮೈಸೂರು: ನಾಗಮಂಗಲ ತಾಲ್ಲೂಕಿನ ಬ್ರಹ್ಮದೇವನಹಳ್ಳಿಯಲ್ಲಿ ನಡೆದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಕ್ಷೇತ್ರದ 9 ಸ್ಥಾನ ಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಜೆಡಿಎಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ.
ಸಂಘದ ಆಡಳಿತ ಮಂಡಳಿ 12 ಮಂದಿ ನಿರ್ದೇ ಶಕರ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಜವರಪ್ಪ ಮತ್ತು ಧನಂಜಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 10 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.
ಸಾಲಗಾರರಲ್ಲದ ಕ್ಷೇತ್ರದ ಒಟ್ಟು 444 ಮತ ದಾರರ ಪೈಕಿ 426 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಸಚಿವ ಚಲುವರಾಯಸ್ವಾಮಿ ಪುತ್ರ ಸಚ್ಚಿನ್ 260 ಮತ ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ರಾಮು 160 ಮತ ಪಡೆದು ಪರಾಭವಗೊಂಡರು. 3 ಮತಗಳು ತಿರಸ್ಕೃತಗೊಂಡಿದ್ದವು.
ಸಾಲಗಾರರ ಕ್ಷೇತ್ರದ 9 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಒಟ್ಟು 21 ಮಂದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಒಟ್ಟು 21 ಮಂದಿ ಅಭ್ಯರ್ಥಿಗಳು ಚುನಾವಣಯಲ್ಲಿ ಸ್ಪರ್ಧೆಯಲಿದ್ದರು. ಒಟ್ಟು 789 ಮತದಾರರ ಪೈಕಿ 710 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಕಾಂಗ್ರೆಸ್ ಬೆಂಬಲಿತ ಕೆ.ಜೆ.ಉಮೇಶ್ (519), ಜೆ.ಪಿ.ಉಮೇಶ್ (484), ಬಿ.ಎಂ.ಪ್ರಕಾಶ್ (410), ರಜನಿ (432), ಟಿ.ಎಚ್.ರಾಜು (328), ಶಿವಣ್ಣ (414), ಎನ್.ಡಿ.ಸಣ್ಣದೇವೇಗೌಡ (384), ಸವಿತ (424) ಹಾಗೂ ಹನುಮಂತೇಗೌಡ (386) ಮತ ಪಡೆದು ಗೆಲುವು ಸಾಧಿಸಿದರೆ ಜೆಡಿಎಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬೃಹತ್ ಪಟಾಕಿ-ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಜೊತೆಗೆಸಚ್ಚಿನ್ ಅವರನ್ನು ಹೊತ್ತು ಮೆರವಣಿಗೆ ಮಾಡಿ ಸಚಿವ ಎನ್. ಚಲುವರಾಯಸ್ವಾಮಿ ಪರ ಜಯ ಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ತಮ್ಮ ಗೆಲುವು ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್, ಸಂಘದಲ್ಲಿ ಸದಸ್ಯತ್ವ ಹೊಂದಿರುವ ಬ್ರಹ್ಮದೇವರಹಳ್ಳಿ ಮತ್ತು ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮತದಾರರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹೋರಾಟ, ಬೆಂಬಲ ಮತ್ತು ಆಶೀರ್ವಾದದಿಂದ ಮೊದಲ ಚುನಾವಣೆಯಲ್ಲಿಯೇ ಗೆದ್ದು ಮೊದಲ ಮೆಟ್ಟಿಲಿನಲ್ಲಿಯೇ ಯಶಸ್ಸು ಕಂಡಿದ್ದೇನೆ. ಇದು ನನ್ನ ಗೆಲುವಲ್ಲ ಜನರ ಗೆಲುಪವು. ಜನರ ನಂಬಿಕೆ ವಿಶ್ವಾಸಕ್ಕೆ ಕಳಂಕ ಬಾರದಂತೆ ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಹೇಳಿದರು.
Advertisement