
ಬೆಂಗಳೂರು: ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳಿಂದ ಕಿರುಕುಳ ಖಂಡಿಸಿ ಸೋಮವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ಕೊಟ್ಟಿದೆ.
ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರು ಏ.14ರವರೆಗೆ ಗಡುವು ನೀಡಿದ್ದರು. ಆದರೆ, ಇದುವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಅವರು ತಿಳಿಸಿದ್ದಾರೆ.
ಇಂದು ಮಧ್ಯ ರಾತ್ರಿಯಿಂದಲೇ ರಾಜ್ಯದಲ್ಲಿರುವ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆಯನ್ನು ಸ್ಥಗಿತಗೊಳಿಸಲಿದ್ದು, ಹಲವು ಸೇವೆಗಳಿಗೆ ಬಂದ್ ಬಿಸಿ ತಟ್ಟಲಿದೆ.
''ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ದರಗಳ ಪರಿಷ್ಕರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಲಾರಿ ಮಾಲೀಕರು, ಪೆಟ್ರೋಲ್ ಬಂಕ್‌ಗಳ ಮಾಲೀಕರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ವಾಣಿಜ್ಯ ಸೇರಿದಂತೆ ಎಲ್ಲ ಸೇವೆಗಳು ಸ್ತಬ್ಧವಾಗಲಿವೆ'' ಎಂದು ಜಿ.ಆರ್.ಷಣ್ಮುಖಪ್ಪ ಅವರು ಹೇಳಿದ್ದಾರೆ.
ನಮ್ಮ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕರ್ನಾಟಕ ಸರ್ಕಾರ ಇನ್ನೂ ಯಾವುದೇ ಮಾತುಕತೆ ಅಥವಾ ಸಭೆಗೆ ನಮ್ಮನ್ನು ಆಹ್ವಾನಿಸಿಲ್ಲ. ಹೀಗಾಗಿ ನಾವು ನಮ್ಮ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮಸುಂದರಂ ಬಾಲನ್ ಅವರು ತಿಳಿಸಿದ್ದಾರೆ.
ಡೀಸೆಲ್ ಬೆಲೆ ಏರಿಕೆ ಮತ್ತು ಟೋಲ್ ಸಮಸ್ಯೆಗಳ ವಿರುದ್ಧ ನಮ್ಮ ಮುಷ್ಕರ ಎಂದು ಬಾಲನ್ ಪಿಟಿಐಗೆ ಹೇಳಿದ್ದಾರೆ.
Advertisement