
ಗದಗ: ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಸಂಕೇತವಾಗಿರುವ ‘ಪಟ್ಟೇದ ಅಂಚು’ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ. ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಈ ಟ್ಯಾಗ್ ದೊರಕಿದೆ.
ಉತ್ತರ ಕರ್ನಾಟಕದ ಇಳಕಲ್, ಬೆಟಗೇರಿ, ಗಜೇಂದ್ರಗಡ ಮತ್ತು ಇತರ ಭಾಗಗಳಿಂದ ಬರುವ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಮಹಿಳೆಯರಲ್ಲಿ, ವಿಶೇಷವಾಗಿ ಮದುವೆಯ ಋತುವಿನಲ್ಲಿ ಭಾರಿ ಆಕರ್ಷಣೆಯಾಗಿದೆ ಮತ್ತು ಈ ಮನ್ನಣೆಯು ನುರಿತ ನೇಕಾರರು ವೃತ್ತಿಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ.
ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ (ಆರ್‌ಸಿಐಪಿಆರ್) ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಿಂದ (ವಿಟಿಪಿಸಿ) ಜಿಐ ಟ್ಯಾಗ್ ನೋಂದಣಿ ಮಾಡಲಾಗಿದೆ.
ಗಜೇಂದ್ರಗಡದ ನೇಕಾರರು ಈ ಮಾನ್ಯತೆಯಿಂದ ಸಂತೋಷಗೊಂಡಿದ್ದಾರೆ. ನಮ್ಮ ಪಟ್ಟೇದ ಅಂಚು ಸೀರೆಗಳಿಗೆ ಭೌಗೋಳಿಕ ಸೂಚನಾ ಟ್ಯಾಗ್ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ. ಈ ಶೈಲಿಯ ಸೀರೆ ಖರೀದಿದಾರರು ಬಾರಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ಮುಂಬೈ, ತೆಲಂಗಾಣ ಮತ್ತು ಇತರ ನೆರೆಯ ರಾಜ್ಯಗಳ ಗ್ರಾಹಕರು ಮತ್ತು ಸಗಟು ವ್ಯಾಪಾರಿಗಳು ಬೃಹತ್ ಆರ್ಡರ್‌ಗಳನ್ನು ನೀಡಲು ನಮ್ಮನ್ನು ಭೇಟಿ ಮಾಡುತ್ತಾರೆ. ನಮ್ಮ ಸಾಂಪ್ರದಾಯಿಕ ಸೀರೆಗಳಿಗೆ ಮದುವೆ ಋತುವಿನಲ್ಲಿ ಉತ್ತಮ ಬೇಡಿಕೆ ಸಿಗುತ್ತದೆ. ಜಿಐ ಟ್ಯಾಗ್‌ಗಾಗಿ ನೋಂದಾಯಿಸಿಕೊಂಡ ನಮ್ಮ ಸಂಸ್ಥೆಯ ಸದಸ್ಯರು ಮತ್ತು ಇತರರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ನೇಕಾರರೊಬ್ಬರು ಹೇಳಿದರು.
ಗದಗದ ಸೀರೆ ಮಾರಾಟಗಾರ ಬಸನಗೌಡ ಪಾಟೀಲ್, "ಗಜೇಂದ್ರಗಡ ಪಟ್ಟೇದ ಅಂಚು ಸೀರೆಗಳಿಗೆ ನಮಗೆ ಅನೇಕ ಆರ್ಡರ್‌ಗಳು ಬರುತ್ತವೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಹಿಳೆಯರು ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ ಈ ಸೀರೆಗಳನ್ನು ಧರಿಸುತ್ತಾರೆ.
ಗಜೇಂದ್ರಗಡ ಸೀರೆಗಳಿಗೆ ಜಿಐ ಟ್ಯಾಗ್ ಸಿಕ್ಕಿದೆ ಎಂದು ತಿಳಿದು ನಮಗೆ ಸಂತೋಷವಾಗಿದೆ. ಇದು ಕೌಶಲ್ಯಪೂರ್ಣ ಕೈಮಗ್ಗ ಕಾರ್ಮಿಕರಲ್ಲಿ ಹೊಸ ವಿಶ್ವಾಸವನ್ನು ತರುತ್ತದೆ" ಎಂದು ಹೇಳಿದರು.
Advertisement