
ಕಲಬುರಗಿ: ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಇಂದು ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂದಿದ್ದ ಪ್ರಧಾನಿ ನರೇಂದ್ರ ಮೋದಿ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಕೊಡದೆ, ಸುಳ್ಳು ಹೇಳಿ ಯುವ ಜನರನ್ನು ವಂಚಿಸಿದರು ಎಂದು ಆರೋಪಿಸಿದರು.
ನಾವು ನುಡಿದಂತೆ ನಡೆಯುತ್ತಾ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಲ್ಲಿ ಯುವ ನಿಧಿ ಕಾರ್ಯಕ್ರಮ ಕೂಡ ಸೇರಿದೆ. ಭತ್ಯೆ ಜೊತೆಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನೂ ಒದಗಿಸುತ್ತಿದ್ದೇವೆ ಎಂದರು.
ಮಾರುಕಟ್ಟೆ ಆಧಾರಿತ ಕೌಶಲ್ಯ ನೀಡಿ ಉದ್ಯೋಗ ಸೃಜಿಸಲು ಸಚಿವ ಶರಣ ಪ್ರಕಾಶ್ ಅವರಿಗೆ ಸೂಚಿಸಿದ್ದೇನೆ. ಹೀಗಾಗಿ ನೋಂದಾಯಿತರಾದ ಎಲ್ಲರಿಗೂ ಉದ್ಯೋಗ ಸಿಕ್ಕೇ ಸಿಗುತ್ತದೆ. ಉದ್ಯೋಗ ಕೊಡುವವರು, ಉದ್ಯೋಗ ಪಡೆಯುವವರನ್ನು ಒಟ್ಟಿಗೇ ಒಂದೇ ವೇದಿಕೆಯಲ್ಲಿ ತರುವ ಮೂಲಕ ಉದ್ಯೋಗಗಳನ್ನು ಒದಗಿಸುವುದಕ್ಕಾಗಿ ವಿಭಾಗಾವಾರು ಉದ್ಯೋಗಮೇಳಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಹೂಡಿಕೆ ಹೆಚ್ಚಾದಷ್ಟೂ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ದೇಶದ ಯುವ ಜನತೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಆದರೆ ನಮ್ಮ ಸರ್ಕಾರ ಯುವ ಜನತೆ ಕೈಗೆ ಉದ್ಯೋಗ ನೀಡಿ ಅವರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಪದವಿ ಹೊಂದಿರುವವರಲ್ಲಿ ನಿರುದ್ಯೋಗ ದರ ಶೇ. 18.9 ಮತ್ತು ಡಿಪ್ಲೊಮಾ ಹೊಂದಿರುವವರಲ್ಲಿ ಶೇ. 17.1 ರಷ್ಟಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರ ಶೇ. 2.5 ರಷ್ಟಿದೆ. ಇದು ಇತರ ರಾಜ್ಯಗಳಿಗಿಂತ ಕಡಿಮೆಯಿದೆ. ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಿಯಾಶೀಲ ಕ್ರಮಗಳಿಗೆ ಇದು ಸಾಕ್ಷಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಎಫ್‌ಡಿಎ (ಪ್ರಥಮ ವಿಭಾಗದ ಸಹಾಯಕ) ಹುದ್ದೆಗಳನ್ನು ಹೆಚ್ಚಿಸಿದರೆ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳು ಬರಲು ಶೇ.60ರಷ್ಟು ಹೆಚ್ಚುವರಿ ಪ್ರೋತ್ಸಾಹಧನ ನೀಡುವಂತೆ ಖರ್ಗೆ (ಮಲ್ಲಿಕಾರ್ಜುನ ಖರ್ಗೆ) ಸೂಚಿಸಿದ್ದಾರೆ. ಈ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಭಾಗದ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
Advertisement