
ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಜೋರಾಗಿದೆ. ಇದರ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಕಿವಿಮಾತು ಹೇಳಿದ್ದಾರೆ. ನಿಮ್ಮ ಸರ್ಕಾರವನ್ನು ಬೀಳಿಸಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ನೀವು, ನೀವೆ ಕಿತ್ತಾಡಿಕೊಳ್ಳುತ್ತಿದ್ದರೆ ಸರ್ಕಾರವನ್ನು ಮುಗಿಸುತ್ತಾರೆ ಹುಷಾರಾಗಿರಿ ಎಂದು ಉಭಯ ನಾಯಕರಿಗೂ ವೇದಿಕೆ ಮೇಲೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ ಅವರು, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ತಾಪ ಇದ್ದರೂ ಒಗ್ಗಟ್ಟಾಗಿರಬೇಕು. ನೀವು ಹುಷಾರಾಗಿರಬೇಕು ಎಂದು ಹೇಳಿದರು. ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಮೂಲಕ ಬೆದರಿಸಲು ಕೇಂದ್ರ ಸರ್ಕಾರ ನೋಡುತ್ತಿದೆ. ಇದಕ್ಕೆಲ್ಲಾ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆದರುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಏಕೆಂದರೆ ನಾನು 1 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಳೆದ 10 ವರ್ಷಗಳಿಂದ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕಡೇಚೂರಿನಲ್ಲಿ ರೈಲು ಬೋಗಿ ಕಾರ್ಖಾನೆ ನಿರ್ಮಾಣಕ್ಕಾಗಿ ಉಚಿತವಾಗಿ ಜಾಗ, ನೀರು, ವಿದ್ಯುತ್ ನೀಡಿದರು ಕೂಡ ಮೋದಿ ಸರ್ಕಾರ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷಿಸುತ್ತಿದೆ. ಕಲಬುರಗಿಯಿಂದ ದೇಶದ ವಿವಿಧ ಭಾಗಗಳಿಗೆ 27ಕ್ಕೂ ಹೆಚ್ಚು ರೈಲುಗಳನ್ನು ತಂದಿದ್ದೇವೆ. ಆದರೆ ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಬಿಡಿ ಎಂದು ಮನವಿ ಮಾಡಿದರೂ ಸಹ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.
ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಶ್ರೀನಿವಾಸ ಸರಡಗಿ ಗ್ರಾಮದ ಜನರು ಮುಕ್ತ ಮನಸ್ಸಿನಿಂದ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಈಗ ನೋಡಿದರೆ ಇಲ್ಲಿಗೆ ವಿಮಾನಗಳೇ ಬರುತ್ತಿಲ್ಲ. ಕಲಬುರಗಿಗೆ ನಿರಂತರ ವಿಮಾನ ಸೇವೆ ಆರಂಭಿಸಲು ಮೋದಿ ಸರ್ಕಾರ ಯಾವುದೇ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇರುವುದು ಒಂದೇ ವಿಷಯದಲ್ಲಿ, ಅದು ವಿಪಕ್ಷ ನಾಯಕರ ಮೇಲೆ ಐಟಿ, ಇಡಿ ದಾಳಿಗಳನ್ನು ಮಾಡಿಸುವುದರಲ್ಲಿ ಮಾತ್ರ ನಿರತವಾಗಿದೆ ಎಂದು ಆರೋಪಿಸಿದರು.
Advertisement