ಜಾತಿಗಣತಿ ವಿಚಾರವಾಗಿ ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ, ಅದಕ್ಕೆಲ್ಲಾ ತಕ್ಕ ಉತ್ತರ: ಡಿ.ಕೆ ಶಿವಕುಮಾರ್

ಈ ವಿಚಾರವಾಗಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಿಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಈ ವರದಿಯ ಸಾರಾಂಶವನ್ನು ನಮ್ಮ ಶಾಸಕರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದೇನೆ.
Dk shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ಕೆಲವು ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ನಾವು ಸೂಕ್ತ ಉತ್ತರ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಾತಿಗಣತಿ ವರದಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಒಕ್ಕಲಿಗ ಸಚಿವರು, ಶಾಸಕರು, ರಾಜ್ಯಸಭೆ ಸದಸ್ಯರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು

ಕರ್ನಾಟಕ ರಾಜ್ಯದ 11ನೇ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಈ ವರದಿ ಬಗ್ಗೆ ಚರ್ಚೆ ನಡೆಸಲು ಇದೇ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಈ ಮಧ್ಯೆ ಮಾಧ್ಯಮಗಳಲ್ಲಿ ವಿವಿಧ ವರದಿಗಳು ಪ್ರಕಟವಾಗುತ್ತಿದ್ದು, ಬೇರೆ ನಾಯಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಿಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಈ ವರದಿಯ ಸಾರಾಂಶವನ್ನು ನಮ್ಮ ಶಾಸಕರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದೇನೆ. ನಮ್ಮ ನಾಯಕರು ಅವರದೇ ಆದ ಅಭಿಪ್ರಾಯ ತಿಳಿಸಿದ್ದಾರೆ ಎಂದರು.

Dk shivakumar
ಇದು ಜಾತಿ ಗಣತಿಯೋ ಅಥವಾ ದ್ವೇಷದ ಗಣತಿಯೋ?: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಕಿಡಿ

ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಲು ನಮ್ಮ ಸರ್ಕಾರವೇ ತೀರ್ಮಾನ ಮಾಡಿ, ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಈ ಸಮಿತಿ ಎಲ್ಲಾ ಕಡೆ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿದೆ. ಶಾಸಕರು ಹೆಚ್ಚಿನ ಮಾಹಿತಿ ಬೇಕು ಎಂದು ಕೇಳಿರುವ ಹಿನ್ನೆಲೆಯಲ್ಲಿ ಅವರಿಗೂ ವರದಿ ಪ್ರತಿ ನೀಡಲಾಗಿದೆ. ಈ ಸಮಿತಿಯು ವಿಸ್ತೃತವಾಗಿ ಅಧ್ಯಯನ ಮಾಡಿದ್ದು, ಅವರ ವರದಿ ಬಗ್ಗೆ ಲೋಪದೋಷ ಹುಡುಕಲು ನಾವು ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ಮಾಧ್ಯಮಗಳಲ್ಲಿ ವಾಸ್ತವಾಂಶ ಹೊರತಾಗಿ ಅನೇಕ ವರದಿ ಮಾಡಲಾಗಿದೆ. ಮುಸಲ್ಮಾನರೆ ಹೆಚ್ಚಾಗಿದ್ದಾರೆ ಎಂಬ ಅರ್ಥ ಬರುವ ರೀತಿ ವರದಿ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ನಾವು ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಈ ಸಭೆಯಲ್ಲಿ ಚರ್ಚೆ ಮಾಡಿರುವ ಅಂಶವನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಈ ವಿಚಾರವನ್ನು ಸಧ್ಯಕ್ಕೆ ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡುವುದಿಲ್ಲ. ಅನೇಕರು ಆಫ್ ದ ರೆಕಾರ್ಡ್ ಎಂದು ಏನೇನೋ ಹೇಳಿರಬಹುದು. ಅದಕ್ಕೆಲ್ಲ ನಾವು ತೆರೆ ಎಳೆಯುತ್ತೇವೆ ಎಂದು ಹೇಳಿದರು.

ಬಹಿರಂಗವಾಗಿರುವ ಅಂಕಿ ಅಂಶಗಳ ಬಗ್ಗೆ ಶಾಸಕರ ಅಭಿಪ್ರಾಯ ಏನು ಎಂದು ಕೇಳಿದಾಗ, “ನಾವು ಒಂದು ಸಮಾಜದ ಬಗ್ಗೆ ಮಾತ್ರ ಚಿಂತೆ ಮಾಡುತ್ತಿಲ್ಲ. ಎಲ್ಲಾ ವರ್ಗದವರ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಇನ್ನು ಕೆಲವರು ಸಚಿವರಾಗಿದ್ದು, ಎಲ್ಲಾ ಸಮಾಜಕ್ಕೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಆನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ” ಎಂದರು.

ಈ ಹಿಂದೆ ಅನೇಕ ಸಚಿವರು ಜಾತಿಗಣತಿ ಬಗ್ಗೆ ಅಪಸ್ವರ ವ್ಯಕ್ತಪಡಿಸುತ್ತಿದ್ದ ಬಗ್ಗೆ ಕೇಳಿದಾಗ, “ಆಗ ಯಾರ ಬಳಿಯೂ ಮಾಹಿತಿ ಇರಲಿಲ್ಲ. ಮಾಹಿತಿ ಬಹಿರಂಗವಾಗಿರುವುದೇ ಮೂರು ದಿನಗಳ ಹಿಂದೆ. ಮೊನ್ನೆ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾದ ಬಳಿಕವಷ್ಟೇ ನಮಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ನಮಗೆ ಸಿಕ್ಕ ಮಾಹಿತಿಯನ್ನು ನಮ್ಮ ಸಹೋದ್ಯೋಗಿ ಶಾಸಕರ ಜತೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ. ಹೀಗಾಗಿ ಸಭೆ ಮಾಡಿದ್ದೇವೆ. ಅವರಿಗೂ ವರದಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವರು ತಮ್ಮ ಸಲಹೆ ನೀಡಬಹುದು” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com