
ಕಲಬುರಗಿ: ರಾಜ್ಯದಲ್ಲಿ ಲಾರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನೊಂದು ದಿನ ನೋಡಿ, ಕಟ್ಟುನಿಟ್ಟಿನ ಕ್ರಮ ಆರಂಭಿಸುವ ಸುಳಿವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಷ್ಕರದ ಹಿಂದೆ ರಾಜಕೀಯ ಅಡಗಿದೆ.ಕೇಂದ್ರ ಸರ್ಕಾರವನ್ನು ದೂಷಿಸದ ಲಾರಿ ಮಾಲೀಕರು, ರಾಜ್ಯ ಸರ್ಕಾರವನ್ನು ಮಾತ್ರ ದೂಷಿಸುತ್ತಿದ್ದಾರೆ ಎಂದರು.
ಲಾರಿ ಮಾಲೀಕರೊಂದಿಗೆ ಈಗಾಗಲೇ ನಾವು ಮಾತುಕತೆ ನಡೆಸಿದ್ದೇವೆ. ರಾಜ್ಯದಲ್ಲಿ ಡೀಸೆಲ್ ಬೆಲೆ ಇಳಿಕೆ ಮತ್ತು ಟೋಲ್ ತೆಗೆಯಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಟೋಲ್ ತೆಗೆದರೆ ಸಾಕೇ? ಕೇಂದ್ರ ಸರ್ಕಾರವೂ ಟೋಲ್ ತೆರವು ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು.
ಕೇಂದ್ರವು ನಿರಂತರವಾಗಿ ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಆದರೆ ಆ ಸಮಯದಲ್ಲ ಲಾರಿ ಮಾಲೀಕರು ಯಾವುದೇ ಹೋರಾಟ ನಡೆಸಲಿಲ್ಲ, ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಸಿದಾಗ ಸುಮ್ಮನಿದ್ದ ಲಾರಿ ಮಾಲೀಕರು ಈಗ ಮುಷ್ಕರ ನಡೆಸುತ್ತಿರುವುದಕ್ಕೆ ಕಾರಣವೇನು? ನೀವು ಯೋಚಿಸಿ ಎಂದು ಸಚಿವರು ಹೇಳಿದರು.
ಲಾರಿ ಮುಷ್ಕರದಿಂದ ಹಾಲು, ದಿನಸಿ ಮತ್ತು ಔಷಧಿಗಳಂತಹ ದೈನಂದಿನ ಅಗತ್ಯ ವಸ್ತುಗಳ ಸಾಗಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇನ್ನೊಂದು ದಿನ ಕಳೆಯಲಿ, ಟ್ರಕ್ ಚಾಲಕರು ಮುಷ್ಕರವನ್ನು ಹಿಂತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಸಚಿವರು ಪ್ರಸ್ತಾಪಿಸಿದ ಎಲ್ಲಾ ಅಂಶಗಳನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ನಮ್ಮ ಮುಷ್ಕರ ಮುಂದುವರಿದಿದೆ. ನಾಳೆ ಏನಾದರೂ ಸರ್ಕಾರದಿಂದ ಪ್ರತಿಕ್ರಿಯೆ ಬರುವ ವಿಶ್ವಾಸದಲ್ಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಕಾರ್ಯದರ್ಶಿ ಸೋಮಸುಂದರಂ ಬಾಲನ್ ಹೇಳಿದ್ದಾರೆ.
Advertisement