2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ: ಬಿಜೆಪಿ, ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ ವಿರುದ್ಧದ ಸಾರ್ವಜನಿಕರ ಕೋಪವು 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತದೆ ಎಂದು ಭವಿಷ್ಯ ನುಡಿದರು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಹಾಲಿನ ಬೆಲೆಯಲ್ಲಿ 4 ರೂ. ಹೆಚ್ಚಳ ಮಾಡಲಾಗಿದ್ದು, ಇತರ ರಾಜ್ಯಗಳಿಗಿಂತ ಕಡಿಮೆ ದರ ಇದಾಗಿದೆ. ಸರ್ಕಾರವು ರೈತರು ಮತ್ತು ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿದೆ. ಟೂತ್‌ಪೇಸ್ಟ್, ಮೊಬೈಲ್ ಫೋನ್‌ಗಳು, ಸಿಮೆಂಟ್ ಮತ್ತು ಕಾರುಗಳಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಮೇಲಿನ ಹೊರೆಗೆ ಉದಾಹರಣೆಗಳಾಗಿವೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಮಂಗಳಸೂತ್ರಗಳಂತಹ ಸಾಂಪ್ರದಾಯಿಕ ಆಭರಣಗಳನ್ನು ಭರಿಸಲು ಸಹ ಮಹಿಳೆಯರಿಗೆ ಕಷ್ಟವಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕರೊಬ್ಬರು ತಮ್ಮ ವಿರುದ್ಧ ಸಲ್ಲಿಸಿದ್ದ ದೂರನ್ನು ತಳ್ಳಿಹಾಕಿದ ಅವರು, 2028 ರಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲುವ ಬಗ್ಗೆ ತಮಗೆ ಭಯವಿಲ್ಲ ಮತ್ತು ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಇಂದು ಫ್ರೀಂಡಂ ಪಾರ್ಕ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಬೆಲೆ ಏರಿಕೆ ಮತ್ತು ಸಾಮಾನ್ಯ ಜನರು ಎದುರಿಸುತ್ತಿರುವ ಕಷ್ಟಗಳಿಗೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ದೂಷಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
'ಕೇಂದ್ರ ಭರವಸೆ ನೀಡಿದ ಒಳ್ಳೆಯ ದಿನಗಳು ಇವೇನಾ?': ಸಿಎಂ ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್‌ಪಿಜಿ ಬೆಲೆ ಏರಿಕೆ ಮಾಡಿದ್ದಕ್ಕೆ ಮತ್ತು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪಪಟ್ಟಿಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿವೆ. ಕಳೆದ 11 ವರ್ಷಗಳಿಂದ ಬಿಜೆಪಿ ನಿಯಮಿತವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ. ಈಗ ಮತ್ತೆ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳು ಏರಿಕೆಯಾಗಿವೆ. ಇದು ಎಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಇಂಧನ ಬೆಲೆಯಲ್ಲಿ 2 ರೂ. ಹೆಚ್ಚಳವಾದರೂ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮೊದಲೇ ಎಚ್ಚರಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್‌ಗೆ ಈಗ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ. ಅವರಿಗೆ ಮರ್ಯಾದೆ ಇದ್ದಿದ್ದರೆ ಅವರು ಹೀಗೆ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದರು.
ಬೆಲೆ ಏರಿಕೆ ವಿರುದ್ಧ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿ ಸರ್ಕಾರವು ಶ್ರೀಮಂತರಿಗೆ ಅನುಕೂಲಕರವಾಗಿದೆ. ಹೆಚ್ಚಿನ ತೆರಿಗೆಗಳು ಮತ್ತು ಬೆಲೆ ಏರಿಕೆಯ ಮೂಲಕ ಬಡವರನ್ನು ಶೋಷಿಸುತ್ತಿದೆ. ಶ್ರೀಮಂತರಿಗೆ ತೆರಿಗೆ ಕಡಿತ ಮತ್ತು ಅನಿಲ, ತೈಲ ಮತ್ತು ಸಿಮೆಂಟ್‌ನಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಜನರ ರಕ್ತ ಹೀರುವ ಕ್ರಮವಾಗಿದೆ ಎಂದು ಕರೆದರು.
ಮತ್ತೊಂದೆಡೆ, ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಮೇಲೆ ತೆರಿಗೆ ಹೊರೆ ಹೇರುತ್ತಿದೆ. ಯುಪಿಎ ಅವಧಿಗಿಂತ ಇಂದಿನ ಎಲ್‌ಪಿಜಿ ಬೆಲೆಗಳು ಕಡಿಮೆಯಾಗಿದೆ ಮತ್ತು ಇಂಧನ ಬೆಲೆ ಏರಿಕೆಯನ್ನು ಹೆಚ್ಚಾಗಿ ಕಂಪನಿಗಳು ಭರಿಸುತ್ತವೆ, ಸಾರ್ವಜನಿಕರಲ್ಲ ಎಂದು ಅವರು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ