News Headlines 17-04-25 | ಜಾತಿ ಗಣತಿ ಕುರಿತ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಳ್ಳದೆ ಮುಕ್ತಾಯ; ಸಂಧಾನ ಸಫಲ, ಲಾರಿ ಮುಷ್ಕರ ವಾಪಸ್; ಮುಸ್ಲಿಂ ಮೀಸಲಾತಿ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ!

News Headlines 17-04-25 | ಜಾತಿ ಗಣತಿ ಕುರಿತ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಳ್ಳದೆ ಮುಕ್ತಾಯ; ಸಂಧಾನ ಸಫಲ, ಲಾರಿ ಮುಷ್ಕರ ವಾಪಸ್; ಮುಸ್ಲಿಂ ಮೀಸಲಾತಿ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ!

1. ಜಾತಿಗಣತಿ: ನಿರ್ಣಯ ಕೈಗೊಳ್ಳದೇ ಸಂಪುಟ ಸಭೆ ಮುಕ್ತಾಯ

ಜಾತಿಗಣತಿ ವರದಿಗೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಯಾವುದೇ ತೀರ್ಮಾನ ಕೈಗೊಳ್ಳದೆ ಮುಕ್ತಾಯವಾಗಿದೆ. ಕ್ಯಾಬಿನೆಟ್ ಮುಂದೆ ತರಲಾಗಿದ್ದ ಜಾತಿ ಗಣತಿ ವಿಷಯ ಮುಂದೂಡಿಕೆಯಾಗಿದೆ. ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.

ಎಲ್ಲಾ ಸಚಿವರು ಅಭಿಪ್ರಾಯ ತಿಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಮೌಖಿಕವಾಗಿ ಅಥವಾ ಲಿಖಿತವಾಗಿ ಅಭಿಪ್ರಾಯ ನೀಡಬಹುದಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದರು.

2. ಸಂಧಾನ ಸಫಲ, ಲಾರಿ ಮುಷ್ಕರ ವಾಪಸ್

ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಕೊನೆಗೂ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದೆ. ಇವರ ಬೇಡಿಕೆ ಈಡೇರಿಸುವ ಸಂಬಂಧ ಇಂದು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.

ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಮುಷ್ಕರವನ್ನು ಹಿಂಪಡೆದಿದ್ದಾರೆ. ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿತ್ತು.

ಡೀಸೆಲ್ ಬೆಲೆ ಕಡಿಮೆ ಮಾಡಲು ಅಥವಾ ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಗಳನ್ನು ತೆಗೆಯಲು ಸರ್ಕಾರ ಒಪ್ಪಿಲ್ಲ. ಆದಾಗ್ಯೂ, ಕೆಲವೊಂದು ಇತರ ಕುಂದುಕೊರತೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಲಾಗಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದರು.

3. ಮುಸ್ಲಿಂ ಮೀಸಲಾತಿ ಮಸೂದೆ ರಾಷ್ಟ್ರಪತಿ ಅನುಮೋದನೆಗೆ ರವಾನೆ

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಗೆಹ್ಲೋಟ್ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿ ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿರುವ ಈ ಮಸೂದೆಯನ್ನು ಈಗ ರಾಜ್ಯ ಸರ್ಕಾರ, ಅನುಮೋದನೆ ಪಡೆಯಲು ರಾಷ್ಟ್ರಪತಿಗಳಿಗೆ ಫೈಲ್ ಅನ್ನು ಕಳುಹಿಸಲಿದೆ. ವಿರೋಧ ಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಕಳೆದ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಉಭಯ ಸದನಗಳಲ್ಲೂ ಮಸೂದೆ ಮಂಡಿಸಿ ಅಂಗೀಕರಿಸಿದೆ.

ಅದರ ನಂತರ ಬಿಜೆಪಿ ಮಸೂದೆಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿತ್ತು. ಸರ್ಕಾರದ ವಿವಿಧ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆ ನೀಡುವಾಗ ಶೇ. 4 ರಷ್ಟು ಮೀಸಲಾತಿಯನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ಕಲ್ಪಿಸುವ ವಿಧೇಯಕ ಇದಾಗಿದೆ. ಎರಡು ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಮೀಸಲಾತಿ ಸಿಗಲಿದೆ.

4. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕರ್ನಾಟಕ ಕಾಂಗ್ರೆಸ್ ಇಂದು ಫ್ರೀಂಡಂ ಪಾರ್ಕ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಬೆಲೆ ಏರಿಕೆ ಮತ್ತು ಸಾಮಾನ್ಯ ಜನರು ಎದುರಿಸುತ್ತಿರುವ ಕಷ್ಟಗಳಿಗೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ದೂಷಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿವೆ. ಕಳೆದ 11 ವರ್ಷಗಳಿಂದ ಬಿಜೆಪಿ ನಿಯಮಿತವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ. ಈಗ ಮತ್ತೆ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳು ಏರಿಕೆಯಾಗಿವೆ. ಇದು ಎಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ಬೆಲೆ ಏರಿಕೆ ವಿರುದ್ಧದ ಸಾರ್ವಜನಿಕರ ಕೋಪವು 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತದೆ ಎಂದು ಭವಿಷ್ಯ ನುಡಿದರು.

5. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶರತ್ ಜವಳಿ ನಿಧನ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಐತಿಹಾಸಿಕ ಕಾವೇರಿ, ಕೃಷ್ಣ ಮತ್ತು ಮಹಾದಾಯಿ ನದಿ ನೀರಿನ ವಿವಾದಗಳ ಕಾನೂನು ತಂಡದಲ್ಲಿ ಕರ್ನಾಟಕದ ಮುಖವಾಗಿದ್ದ ಶರತ್ ಜವಳಿ ನಿಧನರಾಗಿದ್ದಾರೆ. 1960 ರ ದಶಕದ ಅಂತ್ಯದಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಜವಳಿ, ಮೊದಲ ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿಯ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ಐದು ದಶಕಗಳಿಗೂ ಹೆಚ್ಚು ಕಾಲ, ಅವರು ದೇಶದ ಅತ್ಯಂತ ಹೆಚ್ಚಿನ ಮಟ್ಟದ ನೀರಿಗೆ ಸಂಬಂಧಪಟ್ಟ ಕೋರ್ಟ್ ವಾಜ್ಯಗಳಲ್ಲಿ ಕರ್ನಾಟಕದ ಅಚಲ ಧ್ವನಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com