ಜಾತಿ ಗಣತಿ ವರದಿ: ಸಚಿವರಾದ ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ಜೊತೆಗೆ ವಾಗ್ವಾದ; ಎಂಬಿ ಪಾಟೀಲ್ ಹೇಳಿದ್ದು ಹೀಗೆ...
ವಿಜಯಪುರ: ಜಾತಿ ಗಣತಿ ವರದಿ ವಿಚಾರದಲ್ಲಿ ಲಿಂಗಾಯಿತ ಸಮುದಾಯದ ಎಲ್ಲಾ ಏಳು ಕ್ಯಾಬಿನೇಟ್ ಸಚಿವರು ಒಗ್ಗಟ್ಟಿನಿಂದ ಇದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಿಂಗಾಯಿತ ಸಮುದಾಯದ ಸಚಿವರಾದ ಈಶ್ವರ್ ಖಂಡ್ರೆ, ಶರಣ ಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ ನಂತರ ಏಪ್ರಿಲ್ 17 ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.
ಮತ್ತೊಮ್ಮೆ ಸಿಎಂ ಭೇಟಿಯಾಗಿ ಜಾತಿ ಗಣತಿಗೆ ಸಂಬಂಧಿಸಿದ ನಮ್ಮ ಬೇಡಿಕೆಗಳನ್ನು ಅವರ ಮುಂದಿಡುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವು ಒಗ್ಗಟ್ಟಾಗಿದ್ದೇವೆ" ಎಂದು ಅವರು ಪ್ರತಿಪಾದಿಸಿದರು.
ಇದೊಂದು ಸಣ್ಣ ಭಿನ್ನಾಭಿಪ್ರಾಯ:
ಶಿವಾನಂದ ಪಾಟೀಲ್ ಮತ್ತು ಈಶ್ವರ್ ಖಂಡ್ರೆ ಜೊತೆಗೆ ವಾಗ್ವಾದ ವರದಿ ಕುರಿತು ಪ್ರತಿಕ್ರಿಯಿಸಿದ ಎಂಬಿ ಪಾಟೀಲ್, ನಾವೆಲ್ಲರೂ ವಿಶೇಷ ಕ್ಯಾಬಿನೆಟ್ ಸಭೆಗೂ ಮುನ್ನಾ ಭೇಟಿಯಾಗಿ ಜನಗಣತಿ ವರದಿಯ ಬಗ್ಗೆ ಚರ್ಚಿಸಿ, ಕಳವಳ ವ್ಯಕ್ತಪಡಿಸಿದ್ದೇವೆ ಮತ್ತು ಮುಂದಿನ ದಾರಿಯ ಬಗ್ಗೆಯೂ ಮಾತನಾಡಿದ್ದೇವೆ. ನಾವು ಒಗ್ಗಟ್ಟಾಗಿದ್ದೇವೆ. ಚರ್ಚೆಯನ್ನು ಯಾರೊ ಬಹಿರಂಗಪಡಿಸಿದ್ದಾರೆ ಎಂದರು.
ಇದು ಕೇವಲ ಸಣ್ಣ ಭಿನ್ನಾಭಿಪ್ರಾಯ. ಈ ಹಿಂದೆ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಬಗ್ಗೆ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು ಎಂದು ಶಿವಾನಂದ ಪಾಟೀಲ್ ಹೇಳಿದರು. ಆದರೆ, ಕೂಡಲೇ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗಾಗಿಲ್ಲ. ಹಾಗಿದ್ದಿದ್ದರೆ ಇಷ್ಟು ದೊಡ್ಡ ಅಂತರದಲ್ಲಿ ನಾನು ಹೇಗೆ ಗೆಲ್ಲುತ್ತಿದ್ದೆ ಎಂದು ಸಿಎಂ ಹೇಳಿದರು. ನಾನು 30,000 ಮತಗಳ ಅಂತರದಿಂದ ಆಯ್ಕೆಯಾಗಿದ್ದೇನೆ ಎಂದು ಸಿಎಂ ಹೇಳಿದರು ಎಂದು ಪಾಟೀಲ್ ತಿಳಿಸಿದರು.
"ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಆದರೂ ನಾನು ಗೆದ್ದಿದ್ದೇನೆ. ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾಪ ವಿರೋಧಿಸಿದ ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸಿದ ನಮ್ಮ ಸಮುದಾಯದ ಇನ್ನೊಬ್ಬ ನಾಯಕರು ಏಕೆ ಸೋತರು ಎಂದು ನಾನು ಕೇಳಿದೆ. ವಿಷಯ ಅಲ್ಲಿಗೆ ಕೊನೆಗೊಂಡಿತು. ಇದು ಕೇವಲ 60 ಸೆಕೆಂಡ್‌ಗಳ ವಾಗ್ದಾದ ಆಗಿತ್ತು ಎಂದು ಎಂಬಿ ಪಾಟೀಲ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ