Pahalgam terror attack: ಕೇಂದ್ರ ಗುಪ್ತಚರ ಸಂಸ್ಥೆಗಳ ವೈಫಲ್ಯವೇ ಕಾರಣ; ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್!
ಬೆಂಗಳೂರು: ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಬುಧವಾರ ಹೇಳುವ ಮೂಲಕ ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ದೂಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿ ಸಂಪೂರ್ಣ ಯೋಜಿತವಾದದ್ದು, 28 ಜನರನ್ನು ಬಲಿ ಪಡೆದ ಉಗ್ರರ ಹೇಯಕೃತ್ಯವನ್ನು ಖಂಡಿಸುತ್ತೇನೆ ಎಂದರು.
"ಈ ಘಟನೆಯಲ್ಲಿ ಗುಪ್ತಚರ ವೈಫಲ್ಯ ಕಂಡುಬಂದಿದೆ. ಈ ಹಿಂದೆ ಫುಲ್ವಾಮಾ ದಾಳಿಯಾಗಿತ್ತು ಮತ್ತು ಈಗ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದೆ" ಎಂದು ಅವರು ಹೇಳಿದರು.
ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಸೇನಾ ಗುಪ್ತಚರ ದಳ ಬಲಿಷ್ಠವಾಗಿದ್ದು, ಇನ್ನಿತರ ನಿದರ್ಶನಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಈಗ ಗುಪ್ತಚರ ಇಲಾಖೆ ಏಕೆ ವೈಫಲ್ಯವಾಗಿದೆ? ಈ ಉಗ್ರರು ದೇಶವನ್ನು ಹೇಗೆ ಪ್ರವೇಶಿಸಿದರು ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಈ ದಾಳಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದಾರೆ.ಈ ಹಿಂದೆಯೂ ಈ ರೀತಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.ಕೇಂದ್ರ ಸರ್ಕಾರ ಯಾವುದೇ ಕರುಣೆ ಇಲ್ಲದೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗುಪ್ತಚರ ವೈಫಲ್ಯವೂ ಭದ್ರತಾ ಲೋಪಕ್ಕೆ ಕಾರಣವಾಗಿದೆ ಎಂದು ಪರಮೇಶ್ವರ ಆರೋಪಿಸಿದರು. ದಾಳಿಯಲ್ಲಿ ದೇಶದೊಳಗಿನವರ ಕೈವಾಡ ಇದಲ್ಲಿ ಸರ್ಕಾರ ಪರಿಶೀಲಿಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ