ಐಶ್ವರ್ಯಾ ಗೌಡ ಮನೆಯಲ್ಲಿ 2.25 ಕೋಟಿ ರೂ ನಗದು ಪತ್ತೆ: 14 ದಿನ ED ವಶಕ್ಕೆ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಐಶ್ವರ್ಯಾ ಗೌಡ(33) ಅವರನ್ನು ಏಪ್ರಿಲ್ 24 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ.
ಐಶ್ವರ್ಯಾ ಗೌಡ
ಐಶ್ವರ್ಯಾ ಗೌಡ
Updated on

ನವದೆಹಲಿ: ಚಿನ್ನ, ನಗದು ಮತ್ತು ಬ್ಯಾಂಕ್ ಠೇವಣಿಗಳ ಮೇಲೆ ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿ ಜನರನ್ನು ವಂಚಿಸಿದ ಆರೋಪದ ಮೇಲೆ ಬಂಧಿತರಾಗಿರುವ ಐಶ್ವರ್ಯಾ ಗೌಡ ಅವರನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಐಶ್ವರ್ಯಾ ಗೌಡ(33) ಅವರನ್ನು ಏಪ್ರಿಲ್ 24 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 24-25 ರಂದು ಕರ್ನಾಟಕದ 14 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯ ನಿವಾಸ ಮತ್ತು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲ(ED)ಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು.

ದಾಳಿ ವೇಳೆ ಆರೋಪಿ ಐಶ್ವರ್ಯಾ ಗೌಡ ಅವರ ಮನೆಯಲ್ಲಿ ಸುಮಾರು 2.25 ಕೋಟಿ ರೂ. ನಗದು ದೊರೆತಿದ್ದು, ಈ ಬಗ್ಗೆ ಪ್ರಶ್ನಿಸಿದಕ್ಕೆ ಸೂಕ್ತ ಸಮಜಾಯಿಷಿ ನೀಡದ ಕಾರಣ ಅವರನ್ನು ಬಂಧಿಸಲಾಗಿದೆ. ಹೀಗಾಗಿ, ಐಶ್ವರ್ಯಾ ಗೌಡರನ್ನು ನಗರದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತಮ್ಮ ಮನೆ ಮೇಲೆ ಇಡಿ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ ವಿನಯ್ ಕುಲಕರ್ಣಿ ಅವರು, ಕಳೆದ ಒಂದು ತಿಂಗಳಿನಿಂದ ಇಡಿ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.

"ಒಬ್ಬ ವ್ಯಕ್ತಿಗೆ ತೊಂದರೆ ಕೊಡುವುದಕ್ಕೆ ಒಂದು ಮಿತಿ ಇರಬೇಕು. ಜನ ತಮ್ಮಲ್ಲಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನೋಡಿದ್ರೆ ತುಂಬಾ ನೋವಾಗುತ್ತದೆ. ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಮತ್ತು ಜನರಿಂದ ನನ್ನನ್ನು ದೂರವಿಡಲು ಬಯಸುತ್ತಾರೆ" ಎಂದು ಹೇಳಿದ್ದರು.

ಐಶ್ವರ್ಯ ಗೌಡ ಅವರು ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ವಾರಾಹಿ ವರ್ಲ್ಡ್‌ ಆಫ್‌ ಗೋಲ್ಡ್‌ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚಿಸಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜಿ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್​​ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com