ರೋಡ್ ರೇಜ್ ಪ್ರಕರಣ: IAF ಅಧಿಕಾರಿ ಶಿಲಾದಿತ್ಯ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಚರ್ಚೆ ಗ್ರಾಸವಾಗಿದ್ದ ಬೆಂಗಳೂರಿನ ರಸ್ತೆಯೊಂದರಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಬೆಂಗಳೂರು ನಗರ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಅಧಿಕಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಏಪ್ರಿಲ್ 24ರಂದು ಮಧ್ಯಂತರ ನಿರ್ದೇಶನ ನೀಡಿದ್ದಾರೆ. ಏಪ್ರಿಲ್ 21 ರಂದು ಸಿ ವಿ ರಾಮನ್ ನಗರದ ಬಳಿ ಈ ಘಟನೆ ನಡೆದಿತ್ತು.
ಆರಂಭದಲ್ಲಿ, ಬೋಸ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಕಾಲ್ ಸೆಂಟರ್ ಉದ್ಯೋಗಿ ವಿಕಾಸ್ ಕುಮಾರ್ ಎಸ್ ಜೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಿಲಾದಿತ್ಯ ಆರೋಪಿಸಿದ್ದಾರೆ. ನಂತರ ವಿಕಾಸ್ ಕುಮಾರ್ ಪ್ರತಿ-ದೂರು ದಾಖಲಿಸಿದ್ದರಿಂದ, ಐಎಎಫ್ ಅಧಿಕಾರಿಯ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲು ಕಾರಣವಾಯಿತು.
ನ್ಯಾಯಾಲಯವು ತನ್ನ ಮಧ್ಯಂತರ ಆದೇಶದಲ್ಲಿ, ಬೋಸ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಅಥವಾ ಸರಿಯಾದ ಕಾನೂನು ವಿಧಾನಗಳನ್ನು ಅನುಸರಿಸದೆ ಅವರಿಗೆ ಸಮನ್ಸ್ ನೀಡದಂತೆ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಪ್ರಕರಣದ ಆರೋಪಪಟ್ಟಿ ಸಲ್ಲಿಸಬಾರದು ಎಂದೂ ನಿರ್ದೇಶನ ನೀಡಿದೆ. ಇದರ ಜೊತೆಗೆ ಅರ್ಜಿದಾರರು ನಡೆಯುತ್ತಿರುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ