ಅಮ್ನೆಸ್ಟಿ ಇಂಡಿಯಾ ವಿರುದ್ಧದ ED ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಅಮ್ನೆಸ್ಟಿ ಇಂಡಿಯಾ ಮತ್ತು ಪಟೇಲ್ ಇಬ್ಬರಿಗೂ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಐಐಪಿಎಲ್) ಮತ್ತು ಅದರ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ವಿರುದ್ಧ ಜಾರಿ ನಿರ್ದೇಶನಾಲಯದ(ED) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಇತ್ತೀಚೆಗೆ ಅಮ್ನೆಸ್ಟಿ ಇಂಡಿಯಾ ಮತ್ತು ಪಟೇಲ್ ಇಬ್ಬರಿಗೂ ತಾತ್ಕಾಲಿಕ ರಿಲೀಫ್ ನೀಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಮುಂದುವರಿಸದಂತೆ ಇಡಿಗೆ ಸೂಚಿಸಿದ್ದಾರೆ.

ಈ ಸಂಬಂಧ ನ್ಯಾಯಾಲಯವು ಇಡಿಗೆ ನೋಟಿಸ್ ನೀಡಿದ್ದು, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಇಬ್ಬರೂ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ನಿರ್ದೇಶಿಸಿದೆ.

ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಅನಂತ ಪದ್ಮನಾಭನ್ ಅವರ ವಿರುದ್ದದ ತನಿಖೆಗೆ ಹೈಕೋರ್ಟ್​ನ ಮತ್ತೊಂದು ಪೀಠ, ಮಧ್ಯಂತರ ಪರಿಹಾರ ಒದಗಿಸಿದೆ. ಎಐಐಪಿಎಲ್ ಮತ್ತು ಆಕಾರ್ ಪಟೇಲ್ ವಿರುದ್ಧದ ಆರೋಪಗಳು ಅನಂತ ಪದ್ಮನಾಭನ್‌ ಅವರದ್ದು ಒಂದೇ ಸ್ವರೂಪದ್ದಾಗಿವೆ. ಹೀಗಾಗಿ, ಆಕಾರ್ ಪಟೇಲ್ ಮತ್ತು ಎಐಐಪಿಎಲ್ ವಿರುದ್ದದ ಜಾರಿ ನಿರ್ದೇಶನಾಲಯದ ತನಿಖೆಗೆ ಮುಂದಿನ ಆದೇಶದವರೆಗೆ ತಡೆ ನೀಡುತ್ತಿರುವುದಾಗಿ ಪೀಠ ಹೇಳಿದೆ.

ಹೈಕೋರ್ಟ್
ಮನಿ ಲಾಂಡರಿಂಗ್ ಪ್ರಕರಣ: ಅಮ್ನೆಸ್ಟಿ ಇಂಡಿಯಾದ 1.54 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಮತ್ತು ಸಂಬಂಧಿತ ಹಣ ವರ್ಗಾವಣೆ ಚಟುವಟಿಕೆಗಳ ಆಧಾರದ ಮೇಲೆ ಇಡಿ ಈ ಹಿಂದೆ ಮೇ 2022 ರಲ್ಲಿ ಪಟೇಲ್, ಎಐಐಪಿಎಲ್ ಮತ್ತು ಮಾಜಿ ಸಿಇಒ ಜಿ ಅನಂತಪದ್ಮನಾಭನ್ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಿತ್ತು.

2019ರ ಜೂನ್ 12ರಂದು ಕೇಂದ್ರ ಗೃಹ ಇಲಾಖೆ ನೀಡಿದ್ದ ದೂರನ್ನು ಆಧರಿಸಿ ಕೇಂದ್ರೀಯ ತನಿಖಾ ದಳವು (ಸಿಬಿಐ) 2019ರ ನವೆಂಬರ್ 5ರಂದು ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಐಐಪಿಎಲ್), ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಟ್ರಸ್ಟ್ (ಐಎಐಟಿ), ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ (ಎಐಐಎಫ್​​ಟಿ), ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಸೌತ್ ಏಷ್ಯಾ ಫೌಂಡೇಶನ್ (ಎಐಎಸ್ಎಎಫ್) ವಿರುದ್ಧ ಪ್ರಕರಣ ದಾಖಲಿಸಿತ್ತು. ಇದು ದೃಢೀಕೃತ ಅಪರಾಧವಾಗುತ್ತದೆ. ಹೀಗಾಗಿ, ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com