
ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಂಡಿ ಶಸ್ತ್ರ ಚಿಕಿತ್ಸೆ (ಟೋಟಲ್ ನೀ ರಿಪ್ಲೇಸ್‌ಮೆಂಟ್) ಮತ್ತು ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್(ಟಿಎಚ್‌ಆರ್) ಶಸ್ತ್ರಚಿಕಿತ್ಸೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ABArK)ಯೋಜನೆ' ಅಡಿಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆ ಮತ್ತು ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದ್ದು,ಸಂಪೂರ್ಣ ವೆಚ್ಚವನ್ನು ಸರ್ಕಾರವೆ ಪಾವತಿಸಲಿದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳು (PHI ಗಳು) ಸಂಪೂರ್ಣ ಪ್ಯಾಕೇಜ್ ವೆಚ್ಚವನ್ನು ಸರ್ಕಾರದಿಂದ ಪಡೆಯುತ್ತವೆ. ಮಂಡಿ ಶಸ್ತ್ರ ಚಿಕಿತ್ಸೆಗೆ ರೂ 65,000 ಮತ್ತು ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಗೆ ರೂ 1 ಲಕ್ಷ ಹಣ ನೀಡಲಿದೆ. ಇದು ಹಿಂದಿನ ಶೇ. 75ಕ್ಕಿಂತ ಮರುಪಾವತಿ ದರಕ್ಕಿಂತ ಹೆಚ್ಚಾಗಿದೆ.
ಇಲ್ಲಿಯವರೆಗೆ, ರಾಜ್ಯ ಸರ್ಕಾರವು ಒಟ್ಟು ಶಸ್ತ್ರಚಿಕಿತ್ಸೆಯ ವೆಚ್ಚದ ಮುಕ್ಕಾಲು ಭಾಗವನ್ನು ಮಾತ್ರ ನೀಡುತ್ತಿತ್ತು. ಇದರಿಂದ ಆಸ್ಪತ್ರೆಗಳು ಇಂಪ್ಲಾಂಟ್ ವೆಚ್ಚಗಳು ಮತ್ತು ಶಸ್ತ್ರಚಿಕಿತ್ಸಾ ಲಾಜಿಸ್ಟಿಕ್ಸ್ ನಿರ್ವಹಿಸಲು ಹೆಣಗಾಡುವಂತಾಗಿತ್ತು.
ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳ ಅನುಭವಿ ಮೂಳೆಚಿಕಿತ್ಸಕರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳೊಂದಿಗೆ ಕೈ ಜೋಡಿಸುತ್ತಾರೆ. ಇದರ ಅಡಿಯಲ್ಲಿ, ಮೆಂಟರ್ ಸರ್ಜನ್ ಗಳು ಪ್ರಾಯೋಗಿಕ ಕಾರ್ಯವಿಧಾನಗಳ ಮೂಲಕ ಸ್ಥಳೀಯ ತಂಡಗಳಿಗೆ ತರಬೇತಿ ನೀಡಲು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಹೊಸ ಆದೇಶವು ಆಸ್ಪತ್ರೆಯ ಮಟ್ಟ ಮತ್ತು ನಡೆಸಿದ ಶಸ್ತ್ರಚಿಕಿತ್ಸೆಯ ಪ್ರಕಾರವನ್ನು ಅವಲಂಬಿಸಿ ಈ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರಿಗೆ ಹಣ ನೀಡುತ್ತದೆ.
ಖಾಸಗಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರು ಪೂರ್ಣ ಪ್ಯಾಕೇಜ್ ವೆಚ್ಚದ ಮೇಲೆ ಲೆಕ್ಕಹಾಕಿದ ಹಣ ಪಡೆಯುತ್ತಾರೆ, ಆದರೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಅಥವಾ ಸ್ವಾಯತ್ತ ಸಂಸ್ಥೆಯ ಶಸ್ತ್ರಚಿಕಿತ್ಸಕರಿಗೆ ಕಾರ್ಯವಿಧಾನದ ವೆಚ್ಚದ ಶೇ. 75 ರಷ್ಟು ಹಣ ಪಾವತಿಸಲಾಗುತ್ತದೆ.
Advertisement