ಪರಿಶಿಷ್ಟ ಜಾತಿ ಒಳ ಮೀಸಲಾತಿ: ಪರಮೇಶ್ವರ್ ನೇತೃತ್ವದ ಸಭೆ, ಸಮೀಕ್ಷಾ ವರದಿ ಸ್ವಾಗತಿಸಲು ನಿರ್ಧಾರ

ಆಯೋಗವು ಆಗಸ್ಟ್ 4 ರಂದು ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ನಂತರ ಅನುಷ್ಠಾನದ ಕುರಿತು ಆಗಸ್ಟ್ 7 ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದೆ.
Parameshwar
ಪರಮೇಶ್ವರ್
Updated on

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ಸೇರಿದ ಕಾಂಗ್ರೆಸ್‌ ದಲಿತ ಸಚಿವರು, ಶಾಸಕರು, ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ಆಯೋಗದ ಸಮೀಕ್ಷಾ ವರದಿಯನ್ನು ಸ್ವಾಗತಿಸಲು ನಿರ್ಧರಿಸಿದ್ದಾರೆ.

ನ್ಯಾ.ನಾಗಮೋಹನ್‌ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಆ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.

ಆಯೋಗವು ಆಗಸ್ಟ್ 4 ರಂದು ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ನಂತರ ಅನುಷ್ಠಾನದ ಕುರಿತು ಆಗಸ್ಟ್ 7 ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

ಶೇ.15 ಮೀಸಲಾತಿಯನ್ನು ಆಯಾ ಜಾತಿಗಳಿಗೆ ಅನುಗುಣವಾಗಿ ಎ, ಬಿ, ಸಿ, ಡಿ ಮತ್ತು ಇ ಎಂದು ವರ್ಗಗಳಾಗಿ ವಿಂಗಡಿಸುವ ವರದಿಯ ಬಗ್ಗೆ 101 ಜಾತಿಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಈ ಸಭೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಎಚ್.ಸಿ. ಮಹಾದೇವಪ್ಪ, ಶಿವರಾಜ್ ತಂಗಡೈ, ಆರ್.ಬಿ. ತಿಮ್ಮಾಪುರ ಮತ್ತು ಇತರರು ಸೇರಿದಂತೆ ಶಾಸಕರು ಈ ವಿಷಯದಲ್ಲಿ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ಹೇಗೆ ಎದುರಿಸುವುದು ಎಂಬುದರ ಕುರಿತಂತೆಯೂ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಒಳಮೀಸಲಾತಿ ಸಮೀಕ್ಷೆ ವೇಳೆ ರಾಜ್ಯದ ಉಳಿದ ಭಾಗಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಸಮೀಕ್ಷೆ ನಡೆದಿದ್ದರೆ. ಬೆಂಗಳೂರು ನಗರದಲ್ಲಿ ಶೇ. 52 ರಷ್ಟು ಮತ್ರ ಸಮೀಕ್ಷೆಯಾಗಿರುವ ವಿಚಾರವನ್ನು ಶಾಸಕರೊಬ್ಬರು ಪ್ರಸ್ತಾಪಿಸಿದ್ದು, ಈ ಕುರಿತಂತೆ ಚರ್ಚೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

Parameshwar
ಒಳಮೀಸಲಾತಿ ಜಾತಿ ಗಣತಿ: ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಕುಂಠಿತ, ಕ್ರಮಕ್ಕೆ BBMP ಮುಂದು

ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ವರದಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ವರ್ಗದಲ್ಲಿರುವ ವಿವಿಧ ಸಮುದಾಯಗಳು ಒಟ್ಟಾಗಿ ಹೋಗಬೇಕು. ಯಾವುದೇ ಸಂಘರ್ಷ ಆಗಬಾರದು. ಏನೇ ವ್ಯತ್ಯಾಸಗಳಿದ್ದರೂ ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಬರಬೇಕು. ಇಲ್ಲವಾದರೆ, ಒಳಮೀಸಲಾತಿ ಜಾರಿ ಮತ್ತೆ ಮುಂದೆ ಹೋಗುತ್ತದೆ. ಆ ರೀತಿ ಆಗಬಾರದೆಂಬ ಉದ್ದೇಶಕ್ಕಾಗಿ ಇಂದು ನಾವೆಲ್ಲರೂ ಸಭೆ ನಡೆಸಿ, ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ವರದಿ ಸ್ವಾಭಾವಿಕವಾಗಿ ಸಂಪುಟದ ತೀರ್ಮಾನಕ್ಕೆ ಹೋಗುತ್ತದೆ. ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಅದು ಬೇರೆ ವಿಚಾರ. ಪರಿಶಿಷ್ಟ ವರ್ಗದಲ್ಲಿ 101 ಜಾತಿಗಳಿವೆ. ಸಣ್ಣ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ಬಗ್ಗೆ ಸಚಿವರು, ಶಾಸಕರು ಭಾಗವಹಿಸಿ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ವರದಿ ಬಂದ ನಂತರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಎಲ್ಲರಿಗೂ ನ್ಯಾಯ ಸಿಗುವಂತ ರೀತಿಯಲ್ಲಿ ತೀರ್ಮಾನಕ್ಕೆ ಬರಬೇಕು ಎಂದು ಸಲಹೆ ಕೊಡುತ್ತೇವೆ ಎಂದು ತಿಳಿಸಿದರು.

ಒಳಮೀಸಲಾತಿ ಕುರಿತು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಸಚಿವರು, ಶಾಸಕರುಗಳಿಲ್ಲದ ಸಮುದಾಯಗಳಿಗೂ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ‌ ಮೇಲಿದೆ ಎಂಬುದನ್ನು ಚರ್ಚೆ ಮಾಡಿದ್ದೇವೆ. ಸಣ್ಣ ಸಮುದಾಯಗಳಲ್ಲಿ ಯಾರೂ ಶಾಸಕರುಗಳಿಲ್ಲ, ಸಚಿವರುಗಳಿಲ್ಲ. ಅವರಿಗೂ ನ್ಯಾಯ ಸಿಗಬೇಕಲ್ಲವೇ? ಅದನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿದ್ದೇವೆ ಎಂದರು.

ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ನಾವು ಒಮ್ಮತದೊಂದಿಗೆ ಒಳ ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ನಿರ್ಧರಿಸಿದ್ದೇವೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.

2023 ರ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರುವ ಭರವಸೆಯನ್ನು ನೀಡಿದ್ದೆವು.ಅದಕ್ಕೆ ಬದ್ಧವಾಗಿದೆ ಎಂದು ಮಹಾದೇವಪ್ಪ ಅವರು ಹೇಳಿದ್ದಾರೆ.

ಈ ಸಭೆ ಪ್ರಾರಂಭವಾಗುವ ಮೊದಲು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಗಳು ಪರಮೇಶ್ವರ್ ಅವರನ್ನು ಭೇಟಿ ಮಾಡಿ ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com