ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; ತನಿಖಾ-ಪ್ರಾಸಿಕ್ಯೂಷನ್ ತಂಡಗಳಿಗೆ ಪರಮೇಶ್ವರ ಅಭಿನಂದನೆ
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 'ಜೀವಾವಧಿ ಶಿಕ್ಷೆ' ವಿಧಿಸಿದ ನಂತರ ಗೃಹ ಸಚಿವ ಜಿ ಪರಮೇಶ್ವರ ಅವರು ಭಾನುವಾರ ತನಿಖಾ ಮತ್ತು ಪ್ರಾಸಿಕ್ಯೂಷನ್ ತಂಡಗಳನ್ನು ಅಭಿನಂದಿಸಿದ್ದಾರೆ.
'ನ್ಯಾಯಾಂಗ ಮತ್ತು ನ್ಯಾಯಾಧೀಶರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಕ್ಷ್ಯಗಳು, ಸಾಕ್ಷಿಗಳು ಮತ್ತು ಇತರವುಗಳನ್ನು ಒದಗಿಸಿದ್ದಕ್ಕಾಗಿ ನಮ್ಮ ತಂಡವನ್ನು ನಾನು ಮೊದಲು ಅಭಿನಂದಿಸುತ್ತೇನೆ. ಇದು ನ್ಯಾಯಾಂಗವು ಇಂತಹ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ ಎಂಬುದು ನನಗೆ ಖಚಿತವಾಗಿದೆ' ಎಂದು ಸುದ್ದಿಗಾರರಿಗೆ ತಿಳಿಸಿದರು.
'ನಮ್ಮ ಸಚಿವ ಸಂಪುಟದಲ್ಲಿ ಯಾರೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾವು ಅದನ್ನು ತಂಡಕ್ಕೆ ಬಿಟ್ಟಿದ್ದೇವೆ ಮತ್ತು ನ್ಯಾಯಾಂಗವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಅವರು ಅದ್ಭುತ ಕೆಲಸ ಮಾಡಿದ್ದಾರೆ' ಎಂದು ಅವರು ಹೇಳಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದ ತೋಟದ ಮನೆಯಲ್ಲಿ ಮನೆಕೆಲಸದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ನಾಲ್ಕು ಅತ್ಯಾಚಾರ ಪ್ರಕರಣಗಳಲ್ಲಿ ಒಂದರಲ್ಲಿ ದೋಷಿ ಎಂದು ಸಾಬೀತಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಕೇವಲ 14 ತಿಂಗಳ ನಂತರ ಶಿಕ್ಷೆ ವಿಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ