
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ.
6ನೇ ದಿನವಾದ ಇಂದೂ ಕೂಡ ಎಸ್ಐಟಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, 11 ಮತ್ತು 12 ಪಾಯಿಂಟ್ ನಲ್ಲಿ ಅಗೆಯುವ ನಿರೀಕ್ಷೆಯಿದೆ. ಈ ಪ್ರದೇಶಲ್ಲಿ ದಟ್ಟವಾದ ಕಾಡಿದ್ದು, ಈ ಕಾಡಿನ ಪ್ರದೇಶದಲ್ಲಿ ಏನಿದೆ ಎಂಬುದು ಕುತೂಹಲದ ವಿಚಾರವಾಗಿದೆ.
ಶನಿವಾರ 9 ಮತ್ತು 10ನೇ ಸ್ಥಳಗಳಲ್ಲಿ ಯಂತ್ರ ಬಳಸಿ 8 ಅಡಿ ಆಳಕ್ಕೆ ಭೂಮಿ ಅಗೆಯಲಾಗಿತ್ತು. ಆದರೆ, ಯಾವುದೇ ಅಸ್ಥಿಪಂಜರಗಳು ಪತ್ತೆಯಾಗಿರಲಿಲ್ಲ.
ಪ್ರಕರಣದ ಸಾಕ್ಷಿ ಹಾಗೂ ದೂರುದಾರ ವ್ಯಕ್ತಿ ಒಟ್ಟು 13 ಸ್ಥಳಗಳಲ್ಲಿ ಶವ ಹೂತಿರುವುದಾಗಿ ಹೇಳಿದ್ದು, ಈ ವರೆಗೂ ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಸ್ಥಳಧಲ್ಲಿ ಮಾತ್ರ ಅಸ್ತಿಪಂಜರ ಪತ್ತೆಯಾಗಿತ್ತು.
ಮುರಿದ ತಲೆಬುರುಡೆಯ ತುಂಡುಗಳು ಮತ್ತು ಎರಡು ಹಲ್ಲುಗಳು ಸೇರಿದಂತೆ ಇತರೆ ಮೂಳೆಗಳು ಪತ್ತೆಯಾಗಿದ್ದವು. ಅದನ್ನು ಮಣಿಪಾಲದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜುಲೈ 19 ರಂದು ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತ್ತು.
Advertisement