
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ(ಎಸ್‌ಸಿ) ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕವ್ಯಕ್ತಿ ಆಯೋಗ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.
ನ್ಯಾ. ನಾಗಮೋಹನ್ ದಾಸ್ ಅವರು ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಜ್ಯದ ಹಲವಾರು ಸಚಿವರ ಸಮ್ಮುಖದಲ್ಲಿ ಒಳ ಮೀಸಲಾತಿ ಕುರಿತು 1,766 ಪುಟಗಳ ಸಮೀಕ್ಷಾ ವರದಿಯನ್ನು ಸಲ್ಲಿಸಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು, ಆಯೋಗದ ವರದಿಯು ಪರಿಶಿಷ್ಟ ಜಾತಿಗೆ(SC) ಒಳ ಮೀಸಲಾತಿ ಒದಗಿಸಬೇಕೆಂದು ಶಿಫಾರಸು ಮಾಡಿದೆ ಎಂದು ತಿಳಿಸಿದರು.
"ಸಂಪೂರ್ಣ ಡೇಟಾವನ್ನು ವಿಶ್ಲೇಷಿಸಿದ ನಂತರ, ಆಯೋಗವು ತನ್ನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ. ಇದು ಸುಮಾರು 1,766 ಪುಟಗಳ ಸಮೀಕ್ಷಾ ವರದಿಯಾಗಿದೆ. ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡಲಾಗಿದೆ. ಬಹಳ ದಿನಗಳಿಂದ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬೇಕು ಎಂಬುದು ನನ್ನ ಬಯಕೆಯಾಗಿತ್ತು. ಒಳ ಮೀಸಲಾತಿಯನ್ನು ಒದಗಿಸಬೇಕೆಂದು ನಾನು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ" ಎಂದು ನ್ಯಾಯಮೂರ್ತಿ ದಾಸ್ ಅವರು ಇಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
"ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಅನುಷ್ಠಾನದ ಬಗ್ಗೆ ಅಧ್ಯಯನ ಮಾಡಲು ರಚಿಸಲಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಇಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ವರದಿ, ಸಮೀಕ್ಷೆಯ ದತ್ತಾಂಶ ಹಾಗೂ ಅನುಬಂಧಗಳು ಒಟ್ಟು ಸೇರಿ ಸುಮಾರು 1766 ಪುಟಗಳು ಮತ್ತು 6 ಶಿಫಾರಸುಗಳನ್ನು ಒಳಗೊಂಡ ವರದಿ ಇಂದು ಸಲ್ಲಿಕೆಯಾಗಿದ್ದು, ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಇದೊಂದು ಮಹತ್ವಪೂರ್ಣ ಮೈಲಿಗಲ್ಲು ಎಂದು ಭಾವಿಸಿದ್ದೇನೆ." ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನ್ಯಾ. ನಾಗಮೋಹನ್‌ದಾಸ್ ಆಯೋಗ ಒಳಮೀಸಲಾತಿ ಸಂಬಂಧ ವರದಿ ನೀಡಿದೆ. ಅದರಲ್ಲಿ ಏನಿದೆ ಎಂದು ಇನ್ನೂ ನೋಡಿಲ್ಲ. ಆಗಸ್ಟ್ 7ರಂದು ಸಚಿವ ಸಂಪುಟ ಸಭೆಯಿದೆ. ಅದರಲ್ಲಿ ವರದಿಯನ್ನು ಮಂಡಿಸಿ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.
ಅಕ್ಟೋಬರ್ 2024 ರಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಸಲಹೆ ನೀಡಲು ಏಕವ್ಯಕ್ತಿ ಆಯೋಗವನ್ನು ರಚಿಸಿತ್ತು.
Advertisement