
ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಬೇಡಿಕೆಗಳು ನ್ಯಾಯಬದ್ಧವಾಗಿದೆ. ಆದರೆ ನೌಕರರು ಸರ್ಕಾರದ ಸ್ಥಿತಿಯನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಮುಖ್ಯಮಂತ್ರಿಗಳು ಮತ್ತು ಸಾರಿಗೆ ಇಲಾಖೆ ಸಚಿವರು ನೌಕರರಿಗೆ ಸಹಾಯ ಮಾಡುವ ಮನಸ್ಥಿತಿಯಲ್ಲಿದ್ದಾರೆ.
ಆದರೆ ಪರಿಸ್ಥಿತಿಯನ್ನು, ರಾಜ್ಯದ ಸಾಮಾನ್ಯ ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ನೌಕರರು ಅರ್ಥಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಾರಿಗೆ ಇಲಾಖೆ ನೌಕರರ ಮುಷ್ಕರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾಗರಿಕರ ಯೋಗಕ್ಷೇಮ ಮುಖ್ಯವಾಗುತ್ತದೆ. ಹೀಗಾಗಿ ದಯವಿಟ್ಟು ಸರ್ಕಾರ ಜೊತೆ ಸಹಕರಿಸಿ ಎಂದು ಸಾರಿಗೆ ಇಲಾಖೆ ನೌಕರರಿಗೆ ನಾನು ಮನವಿ ಮಾಡುತ್ತೇನೆ. ಮುಷ್ಕರ ಮಧ್ಯೆ ಕರ್ತವ್ಯಕ್ಕೆ ಹಾಜರಾಗಿರುವ ಕೆಲವು ಬಸ್ ಕಂಡಕ್ಟರ್, ಡ್ರೈವರ್ ಗಳಿಗೆ ನಾನು ಅಭಿನಂದನೆ ಹೇಳುತ್ತೇನೆ. ಸಾರ್ವಜನಿಕರ ಬದುಕು ಬಹಳ ಮುಖ್ಯವಾಗುತ್ತದೆ, ನೀವು ಹಠ ಮಾಡಬೇಡಿ, ಸರ್ಕಾರ ಸಾಧ್ಯವಿರುವ ಸಹಾಯ ಮಾಡುತ್ತದೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಕೋರ್ಟ್ ಕೂಡ ಮುಷ್ಕರ ನಡೆಸದಂತೆ ನಿರ್ದೇಶನ ನೀಡಿದೆ. ಕಾನೂನಿಗೆ ಕೂಡ ಗೌರವ ಕೊಡದೆ ಹಠಬಿದ್ದು ಮುಷ್ಕರ ಮಾಡಬೇಡಿ,ಸಹಕಾರ ನೀಡಿ ಎಂದರು.
ಪ್ರಧಾನಿ ಬೆಂಗಳೂರು ಭೇಟಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 10ನೇ ತಾರೀಕು ಮೆಟ್ರೊ ಹಳದಿ ಮಾರ್ಗ ಉದ್ಘಾಟನೆಗೆ ಬರುತ್ತೇನೆ ಎಂದು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಇಂದು ಸ್ಥಳದ ಪೂರ್ವಭಾವಿ ಪರಿಶೀಲನೆ ನಡೆಸುತ್ತೇನೆ, ಅಧಿಕೃತವಾಗಿ ಎಷ್ಟು ಹೊತ್ತಿಗೆ ಬರುವುದು ಎಂದು ತಿಳಿಸಿಲ್ಲ. ಪ್ರಧಾನಿಯವರ ಬೇರೆ ಕಾರ್ಯಕ್ರಮಗಳು ಕೂಡ ಇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
Advertisement