
ಚಿತ್ರದುರ್ಗ: ಎರಡು ಬಸ್ ಗಳ ನಡುವೆ ಸಿಲುಕಿ ಆಟೋ ನಜ್ಜುಗುಜ್ಜಾದರೂ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೋಮವಾರ ಸಂಜೆ ನಡೆದಿದೆ.
ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋರಿಕ್ಷಾಕ್ಕೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.
ಪರಿಣಾಮ ಎರಡು ಬಸ್ ಗಳ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ನವೀನ್, ಪೂಜಾ, ನಿಂಗರಾಜು ಮತ್ತು ಮಹಾಂತೇಶ್ ಎಂದು ಗುರುತಿಸಲಾಗಿದೆ.
ನಾಲ್ವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಖಾಸಗಿ ಬಸ್ ನಿಂದಲೇ ಅಪಘಾತವಾಗಿದ್ದು, ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement