ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನ ವಿಕ್ಟೋರಿಯಾ ಮತ್ತು ವಾಣಿವಿಲಾಸ್ ಸಾರ್ವಜನಿಕ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣುಪ್ರಕಾಶ್ ಪಾಟೀಲ್ ಅವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಆಸ್ಪತ್ರೆಯ ಒಳರೋಗಿಗಳು, ಹೊರರೋಗಿಗಳ ಜೊತೆ ಮಾತಾಡಿದರು. ಇದೇ ವೇಳೆ ರೋಗಿಗಳ ಜೊತೆ ವೈದ್ಯರು ಸಹಾನುಭೂತಿಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದರು. ನಂತರ ಮಾತಾಡಿದ ಸಿಎಂ, ತಮ್ಮೊಂದಿಗೆ ಮಾತಾಡಿದ ರೋಗಿಗಳು ಮತ್ತು ಅವರ ಸಹಾಯಕರು ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ ಲಕ್ಷಾಂತರ ರೂ. ವೆಚ್ಚ ಆಗುತ್ತದೆ. ಹೀಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಬೇಡಿಕೆ ಇದೆ. ಈ ಬಗ್ಗೆ ಪ್ರಸ್ತಾವನೆ ಇದ್ದು ಸರ್ಕಾರ ಅದನ್ನು ಪರಿಗಣಿಸುತ್ತದೆ ಎಂದರು.
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಾನವ ಅವಶೇಷಗಳು ಪತ್ತೆಯಾದ ಸ್ಥಳ ಸಂಖ್ಯೆ 14ರಲ್ಲಿ ಇಂದು ಮತ್ತೆ ಎಸ್‌ಐಟಿ ಅಗೆಯುವ ಕಾರ್ಯವನ್ನು ಪ್ರಾರಂಭಿಸಿದೆ. ಪಾಯಿಂಟ್ 11ನೇ ಸ್ಥಳದಿಂದ ಸುಮಾರು 80 ಮೀಟರ್ ದೂರದಲ್ಲಿರುವ ಮರದ ಕೆಳಗೆ ತಲೆಬುರುಡೆ, ಸೀರೆ ಮತ್ತು ಪುರುಷನ ಚಪ್ಪಲಿಗಳು ಸೇರಿದಂತೆ ಮಾನವ ಅವಶೇಷಗಳು ಕಂಡುಬಂದ ಸ್ಥಳದಲ್ಲಿ ಅಗೆಯುವ ಕಾರ್ಯ ನಡೆಯುತ್ತಿದೆ. ದೂರುದಾರರು ಎಸ್‌ಐಟಿ ಅಧಿಕಾರಿಗಳನ್ನು ಹೊಸ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮಾನವ ಅವಶೇಷಗಳು ಪತ್ತೆಯಾದ ಈ ಸ್ಥಳವನ್ನು 14ನೇ ಸ್ಥಳ ಎಂದು ಗುರುತಿಸಲಾಗಿದೆ. ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿರುವ ಸ್ಥಳ ಸಂಖ್ಯೆ 13ರಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಎಸ್ಐಟಿ ಮುಂದಾಗಿದೆ. ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ವ್ಯವಸ್ಥೆ ಬಳಸುವ ಸಂಬಂಧ ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದೆ. ದೂರುದಾರನು ಹೇಳಿರುವಂತೆ ಸ್ಥಳ 13ರಲ್ಲಿ ಬಹಳಷ್ಟು ಶವ ಹೂತಿದ್ದು, ಇಲ್ಲಿ ಅಸ್ಥಿಪಂಜರ ಸಿಗುವ ಸಾಧ್ಯತೆ ಇದೆ ಎಂದಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಯಾಕೆ ರದ್ದುಗೊಳಿಸಬಾರದು ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್ ವಾದಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಕೊಲೆ ಆರೋಪಿಗಳು ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಇಂದು ಲಿಖಿತ ವಾದಗಳನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿರುವುದಾಗಿ ಯಾರೂ ಸಾಕ್ಷಿ ಹೇಳಿಲ್ಲ. ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಹೀಗಾಗಿ ಜಾಮೀನು ರದ್ದುಗೊಳಿಸದಂತೆ ದರ್ಶನ್ ಪರ ವಕೀಲರು ತಿಳಿಸಿದ್ದಾರೆ. ನನಗೆ ಮಗಳಿದ್ದಾಳೆ ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಜಾಮೀನು ರದ್ದುಗೊಳಿಸದಂತೆ ಪವಿತ್ರಾಗೌಡ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್ ಅವರು ಸಾಮಾಜಿಕ ಕಾರ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಪಂತ್ ಅವರಿಂದ ಆರ್ಥಿಕ ನೆರವು ಸಿಕ್ಕಿದ್ದರಿಂದಲೇ ಜಮಖಂಡಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿಸಿಎ ಓದಲು ಸಾಧ್ಯವಾಗಿದೆ ಎಂದು ಬಾಗಲಕೋಟೆಯ ಜ್ಯೋತಿ ಕಣಬೂರಮಠ ಹೇಳಿದ್ದಾರೆ. ಪಿಯುನಲ್ಲಿ ಶೇ 83ರಷ್ಟು ಅಂಕಗಳನ್ನು ಪಡೆದಿದ್ದರೂ, ತನ್ನ ವ್ಯಾಸಂಗವನ್ನು ಮುಂದುವರಿಸಲು ಆರ್ಥಿಕ ಸಂಕಷ್ಟ ಎದುರಾಯಿತು. ಜ್ಯೋತಿ ತಂದೆ ತೀರ್ಥಯ್ಯ ಹಳ್ಳಿಯಲ್ಲಿ ಸಣ್ಣ ಚಹಾ ಅಂಗಡಿ ನಡೆಸುತ್ತಿದ್ದು, ಅದರಿಂದ ಕಾಲೇಜು ಶುಲ್ಕವನ್ನು ಭರಿಸುವುದು ಅಸಾಧ್ಯವಾಗಿತ್ತು. ಹೀಗಿರುವಾಗ ರಿಷಬ್ ಪಂತ್ ಗೆ ಆತ್ಮೀಯರಾಗಿರುವ ತಮ್ಮದೇ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ ಅವರನ್ನು ಜ್ಯೋತಿ ತಂದೆ ಸಂಪರ್ಕಿಸಿದರು. ಈ ವಿಷಯ ತಿಳಿದ ಪಂತ್ ಜುಲೈ 17ರಂದು ಬಿಎಲ್‌ಡಿಇ ಕಾಲೇಜಿನ ಖಾತೆಗೆ ಮೊದಲ ಸೆಮಿಸ್ಟರ್‌ನ ಶುಲ್ಕ 40 ಸಾವಿರ ರೂ. ಹಣವನ್ನು ನೇರವಾಗಿ ಹಣ ವರ್ಗಾವಣೆ ಮಾಡಿ ಜ್ಯೋತಿಗೆ ಆರ್ಥಿಕ ಬೆಂಬಲ ನೀಡಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಮಸೀದಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ದಾದಾಪೀರ್ ನಾಗರ್ಚಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಸೀದಿ ಒಳಗಿನ ಸಿಸಿಟಿವಿ ದೃಶ್ಯಾವಳಿಯನ್ನು ಪೋಸ್ಟ್ ಮಾಡಿದ ನಂತರ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಘಟನೆ ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ತಕ್ಷಣ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Advertisement