
ಬೆಂಗಳೂರು: ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ವರದಿಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಆಗಸ್ಟ್ 16 ರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಆಗಸ್ಟ್ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 1,766 ಪುಟಗಳ ವರದಿ ಸಲ್ಲಿಸಿತ್ತು.
ಆಯೋಗ ಮೂರು ತಿಂಗಳ ಅವಧಿಯಲ್ಲಿ ವೈಜ್ಞಾನಿಕವಾಗಿ ಶೇ. 92 ರಷ್ಟು ಸಮುದಾಯದ ಜನರನ್ನು ಸಮೀಕ್ಷೆಗೆ ಒಳಪಡಿಸಿ ವರದಿ ತಯಾರಿಸಿದೆ. ಈ ವರದಿ ಸಂಪುಟದ ಮುಂದೆ ಮಂಡಿಸಲಾಗಿದ್ದು, ಎಲ್ಲಾ ಸಚಿವರಿಗೂ ಅದರ ಪ್ರತಿಗಳನ್ನು ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಆಯೋಗದ ವರದಿಯನ್ನು ಸ್ವೀಕರಿಸಿದ್ದು, ಅದನ್ನು ಅಧ್ಯಯನ ಮಾಡಿದ ನಂತರ ಆಗಸ್ಟ್ 16 (ಶನಿವಾರದಂದು) ನಡೆಯಲಿರುವ ವಿಶೇಷ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಸಮೀಕ್ಷೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹಾಗೂ ವರ್ಗೀಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ವರದಿಯನ್ನು ನಾನು ಕೂಡಾ ಇನ್ನೂ ಪಡೆದಿರಲಿಲ್ಲ. ಮಾಧ್ಯಮಗಳ ಮೂಲಕ ವರದಿ ಬಗ್ಗೆ ತಿಳಿದಿದ್ದೇನೆ. ಸರ್ವೇ ವರದಿಯೊಂದಿಗೆ ಅದನ್ನು ಹೋಲಿಕೆ ಮಾಡಲು ಹೋಗುವುದಿಲ್ಲ ಎಂದರು.
Advertisement