
ರಾಜ್ಯಾದ್ಯಂತ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಔಪಚಾರಿಕವಾಗಿ ವಿನಂತಿ ಮಾಡಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ನಿಯೋಗವು ಮಹದೇವಪುರ ಮತ್ತು ಇತರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖಿಸಿ ನಕಲಿ ಮತದಾರರ ನಮೂದುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದರು.
ಐದರಿಂದ ಆರು ಕ್ಷೇತ್ರಗಳನ್ನು ಮಾತ್ರ ವಿವರವಾಗಿ ಪರಿಶೀಲಿಸಲಾಗಿದ್ದರೂ, ರಾಜ್ಯಾದ್ಯಂತ ಇತರ ಕ್ಷೇತ್ರಗಳಲ್ಲಿ ಇದೇ ರೀತಿಯ ಅಕ್ರಮಗಳು ನಡೆದಿರುವ ಸಾಧ್ಯತೆಯಿದೆ. ನಾವು ಮಹದೇವಪುರ ಅಥವಾ ಗಾಂಧಿನಗರದಿಂದ ವಿವರವಾದ ಉದಾಹರಣೆಗಳನ್ನು ಸಲ್ಲಿಸಲಿಲ್ಲ, ಸಂಪೂರ್ಣ ಲೆಕ್ಕಪರಿಶೋಧನೆ ನಡೆಸುವಂತೆ ನಾವು ಆಯೋಗವನ್ನು ವಿನಂತಿ ಮಾಡಿಕೊಂಡಿದ್ದೇವೆ ಎಂದರು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಪಗಳ ಕುರಿತು ನಮಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ನಾವು ದಾಖಲೆಗಳನ್ನು ಪಡೆದಾಗ ಪರಿಶೀಲಿಸಬಹುದು. ಅದಕ್ಕಾಗಿಯೇ ನಾವು ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದೇವೆ. ಇಲ್ಲಿಯವರೆಗೆ ನಮಗೆ ಜ್ಞಾಪಕ ಪತ್ರ ಮಾತ್ರ ಬಂದಿದೆ ಎಂದು ತಿಳಿಸಿದೆ.
Advertisement