
ಮೈಸೂರು: ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಸಿಂಹಿಣಿ 'ರಕ್ಷಿತಾ' ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದ ಸುಮಾರು 21 ವರ್ಷ 4 ತಿಂಗಳು ವಯಸ್ಸಿನ ಹೆಣ್ಣು ಸಿಂಹ 'ರಕ್ಷಿತ' ಸಿಂಹಿಣಿ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಗೆ ಸಾವನ್ನಪ್ಪಿದೆ. ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಹಿಣಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಅಂತೆಯೇ ಸಿಂಹಿಣಿ ರಕ್ಷಿತಾ ಸಾವಿಗೆ ಮೈಸೂರು ಮೃಗಾಲಯವು ತೀವ್ರ ಸಂತಾಪ ಸೂಚಿಸಿದೆ. ಈ ಸಿಂಹಿಣಿಯು ದಿನಾಂಕ 01/04/2004ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹಗಳಿಗೆ ಜನಿಸಿದ್ದು, ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಯೋಸಹಜ ಕಾಯಿಲೆಯಿಂದಾಗಿ ಈ ಸಿಂಹಿಣಿಯು ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿತ್ತು.
ಮೈಸೂರು ಮೃಗಾಲಯಕ್ಕೆ ‘ರಕ್ಷಿತ’ ಸಿಂಹಿಣಿಯ ಸಾವು ಅಪಾರ ನಷ್ಟವನ್ನುಂಟುಮಾಡಿದೆ. ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ರಕ್ಷಿತಳ ಸಾವಿಗೆ ತೀವ್ರ ಸಂತಾಪ ಸೂಚಿಸುತ್ತದೆ ಹಾಗೂ ರಕ್ಷಿತಾಳ ಚಿಕಿತ್ಸೆಯ ಸಂದರ್ಭದಲ್ಲಿ ಜಾಗತೀಕ ಪಶುವೈದ್ಯಕೀಯ ಸಮೂದಾಯ ಮತ್ತು ವನ್ಯಜೀವಿ ಸಂರಕ್ಷಕರು ನೀಡಿದ ಬೆಂಬಲವನ್ನು ಶ್ಲಾಘಿಸಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement